9.2 C
New York
Friday, March 31, 2023

Buy now

spot_img

ಪಂಜಾಬ್ ತಂಡಕ್ಕೆ ಮಣ್ಣು ಮುಕ್ಕಿಸಿ ಹೀರೋಗಳಾದ ರಾಜಸ್ಥಾನ್ ರಾಯಲ್ಸ್‌ನ ಇಬ್ಬರು ಆಟಗಾರರಿವರು

ಇದೇ ವರ್ಷ ಭಾರತದಲ್ಲಿ ಆರಂಭವಾಗಿ ಕೊರೋನಾವೈರಸ್ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡು ಮುಂದೂಡಲ್ಪಟ್ಟಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮರಳಿ ಬಂದಿದೆ. ಹೌದು, ಏಪ್ರಿಲ್ ತಿಂಗಳಿನಲ್ಲಿ ಭಾರತ ನೆಲದಲ್ಲಿ ಆರಂಭವಾಗಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ದ್ವಿತೀಯ ಭಾಗ ಸೆಪ್ಟೆಂಬರ್ 19ರ ಭಾನುವಾರದಿಂದ ಯುಎಇಯಲ್ಲಿ ಪುನರಾರಂಭವಾಗಿದ್ದು ಟೂರ್ನಿಯ 32ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಸೆಣಸಾಟ ನಡೆಸಿದ್ದು ಪಂದ್ಯ ರೋಚಕ ಅಂತ್ಯ ಕಂಡಿದೆ.

ದುಬೈ ನಗರದ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಪಂಜಾಬ್ ಕಿಂಗ್ಸ್ ಎದುರಾಳಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ವಿಫಲವಾಯಿತು. ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಪರ ತಂಡದ ಆರಂಭಿಕ ಆಟಗಾರರಾದ ಎವಿನ್ ಲೆವಿಸ್ ಮತ್ತು ಯಶಸ್ವಿ ಜೈಸ್ವಾಲ್ ಪವರ್‌ಪ್ಲೇನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ರಾಜಸ್ಥಾನ್ ರಾಯಲ್ಸ್ ಪರ ಎವಿನ್ ಲೆವಿಸ್ 36, ಯಶಸ್ವಿ ಜೈಸ್ವಾಲ್ 49, ಲಿಯಾಮ್ ಲಿವಿಂಗ್‌ಸ್ಟನ್ 25 ಮತ್ತು ಮಹಿಪಾಲ್ ಲೊಮ್ರಾರ್ 43 (17 ಎಸೆತಗಳಲ್ಲಿ) ರನ್ ಬಾರಿಸಿದ ಕಾರಣ ತಂಡವು 20 ಓವರ್‌ಗಳಲ್ಲಿ 185 ರನ್‌ಗಳಿಗೆ ಆಲ್ ಔಟ್ ಆಯಿತು. ರಾಜಸ್ಥಾನ್ ರಾಯಲ್ಸ್ ನೀಡಿದ 186 ರನ್‌ಗಳ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಪರ ಆರಂಭಿಕ ಆಟಗಾರರಾದ ಕೆ ಎಲ್ ರಾಹುಲ್ (49) ಮತ್ತು ಮಯಾಂಕ್ ಅಗರ್ವಾಲ್ (67) ಅತ್ಯದ್ಭುತ ಆರಂಭ ಮಾಡಿದರು. ಹೀಗೆ ಉತ್ತಮ ಆರಂಭ ಪಡೆದುಕೊಂಡ ಪಂಜಾಬ್ ಕಿಂಗ್ಸ್ ಇನ್ನೂ ಒಂದೆರಡು ಓವರ್‌ಗಳು ಬಾಕಿ ಇರುವಾಗಲೇ ಜಯಭೇರಿ ಬಾರಿಸಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಕೊನೆಯ ಹಂತದಲ್ಲಿ ಎಡವಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಲಷ್ಟೇ ಶಕ್ತವಾಯಿತು.
ಹೀಗೆ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಪಂಜಾಬ್ ಕಿಂಗ್ಸ್ ತಂಡ ಕೈಚೆಲ್ಲಿರುವುದರ ಕುರಿತು ಈಗ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಪಂಜಾಬ್ ಕಿಂಗ್ಸ್ ತಂಡಕ್ಕೆ ಮಣ್ಣು ಮುಕ್ಕಿಸಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಹೀರೋಗಳಾದ ಇಬ್ಬರು ಆಟಗಾರರ ಕುರಿತು ಈ ಕೆಳಕಂಡಂತೆ ದೊಡ್ಡ ಮಟ್ಟದಲ್ಲಿ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.

ಅಂತಿಮ 2 ಓವರ್‌ನಲ್ಲಿ ರಾಜಸ್ಥಾನ್ ಬೌಲರ್‌ಗಳ ಚಮತ್ಕಾರ
ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಒಂದೆರಡು ಓವರ್‌ಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಲಿದೆ ಎನ್ನುವ ಮಟ್ಟಿಗೆ ಆರಂಭವನ್ನು ಪಡೆದುಕೊಂಡು ಗೆಲುವಿನತ್ತ ಮುನ್ನುಗ್ಗುತ್ತಿದ್ದ ಪಂಜಾಬ್ ಕಿಂಗ್ಸ್ ತಂಡಕ್ಕೆ ಅಂತಿಮ 2 ಓವರ್ ಬೌಲಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡದ ಮುಸ್ತಫಿಜರ್ ರಹಮಾನ್ ಮತ್ತು ಕಾರ್ತಿಕ್ ತ್ಯಾಗಿ ಖಳನಾಯಕರಾಗಿ ಕಾಡಿದರು. ಹೌದು ಅಂತಿಮವಾಗಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 12 ಎಸೆತಗಳಲ್ಲಿ ಕೇವಲ 8 ರನ್‌ಗಳ ಅಗತ್ಯತೆ ಇತ್ತು. ಈ ಸಂದರ್ಭದಲ್ಲಿ 19ನೇ ಓವರ್ ಬೌಲಿಂಗ್ ಮಾಡಿದ ಮುಸ್ತಫಿಜರ್ ರಹಮಾನ್ ಕೇವಲ 4 ರನ್ ನೀಡಿ ಉತ್ತಮ ಬೌಲಿಂಗ್ ಮಾಡಿದರು. ನಂತರ ಕೊನೆಯ ಓವರ್‌ನಲ್ಲಿ ಪಂಜಾಬ್ ತಂಡಕ್ಕೆ ಗೆಲ್ಲಲು 4 ರನ್‌ಗಳ ಅಗತ್ಯತೆ ಇತ್ತು, ಕಣದಲ್ಲಿ ಬಲಿಷ್ಠ ಬ್ಯಾಟ್ಸ್‌ಮನ್‌ಗಳೂ ಕೂಡ ಇದ್ದರು ಹಾಗೂ ಕೈನಲ್ಲಿ ಇನ್ನೂ 8 ವಿಕೆಟ್‍ಗಳೂ ಸಹ ಇದ್ದವು. ಹೀಗೆ ಅಂತಿಮ ಓವರ್‌ನಲ್ಲಿ ಬಲಿಷ್ಠ ಬ್ಯಾಟ್ಸ್‌ಮನ್‌ಗಳಿದ್ದರೂ ಸಹ ಅತ್ಯದ್ಭುತ ಬೌಲಿಂಗ್ ಪ್ರದರ್ಶನ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ ಕಾರ್ತಿಕ್ ತ್ಯಾಗಿ ನೀಡಿದ್ದು ಕೇವಲ ಒಂದು ರನ್. ಹೌದು 6 ಎಸೆತಗಳನ್ನು ಎಸೆದ ಕಾರ್ತಿಕ್ ತ್ಯಾಗಿ 1 ರನ್ ನೀಡಿ, 2 ವಿಕೆಟ್ ಪಡೆದುಕೊಳ್ಳುವುದರ ಮೂಲಕ ಒತ್ತಡ ಮತ್ತು ಕಠಿಣತೆಯಿಂದ ಕೂಡಿದ್ದ ಅಂತಿಮ ಓವರ್‌ನಲ್ಲಿ ಅತ್ಯದ್ಭುತ ಪ್ರದರ್ಶನವನ್ನು ನೀಡಿದರು. ಹೀಗೆ ಹತ್ತೊಂಬತ್ತನೇ ಮತ್ತು ಇಪ್ಪತ್ತನೇ ಓವರ್‌ಗಳಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ ಮುಸ್ತಫಿಜರ್ ರಹಮಾನ್ ಮತ್ತು ಕಾರ್ತಿಕ್ ತ್ಯಾಗಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಹೀರೋಗಳಾಗಿ ಹೊರಹೊಮ್ಮಿದರು.

ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಕಾರ್ತಿಕ್ ತ್ಯಾಗಿ
ಕೊನೆಯ ಓವರ್ ಸಿಗುವ ತನಕ 3 ಓವರ್ ಬೌಲಿಂಗ್ ಮಾಡಿದ್ದ ಕಾರ್ತಿಕ್ ತ್ಯಾಗಿ ಯಾವುದೇ ವಿಕೆಟ್ ಪಡೆಯದೇ 28 ರನ್ ನೀಡಿ ಸಾಧಾರಣ ಪ್ರದರ್ಶನವನ್ನು ನೀಡಿದ್ದರು. ಆದರೆ ಅಂತಿಮ ಓವರ್‌ನಲ್ಲಿ ಕೇವಲ ಒಂದು ರನ್ ನೀಡಿ, 2 ವಿಕೆಟ್ ಪಡೆದ ಕಾರ್ತಿಕ್ ತ್ಯಾಗಿ ಪಂಜಾಬ್ ಕಿಂಗ್ಸ್ ತಂಡಕ್ಕೆ 4 ರನ್ ಬಾರಿಸಲು ಬಿಡದೇ ಆಕ್ರಮಣಕಾರಿ ಬೌಲಿಂಗ್ ಮಾಡಿದರು. ಹೀಗೆ ಅಂತಿಮ ಓವರ್‌ನಲ್ಲಿ ಅತ್ಯದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಕಾರ್ತಿಕ್ ತ್ಯಾಗಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಅಂಕಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ಸ್ಥಾನ
ಹೀಗೆ ಪಂಜಾಬ್ ಕಿಂಗ್ಸ್ ವಿರುದ್ಧ ರೋಚಕ ಜಯ ಸಾಧಿಸಿದ ರಾಜಸ್ಥಾನ್ ರಾಯಲ್ಸ್ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿತು. ಟೂರ್ನಿಯಲ್ಲಿ ಇದುವರೆಗೂ 8 ಪಂದ್ಯಗಳನ್ನಾಡಿರುವ ರಾಜಸ್ಥಾನ್ ರಾಯಲ್ಸ್ 4 ಪಂದ್ಯಗಳಲ್ಲಿ ಜಯ ಗಳಿಸಿದ್ದು, 4 ಪಂದ್ಯಗಳಲ್ಲಿ ಸೋಲುಂಡಿದೆ. ಹೀಗೆ ಆಡಿರುವ ಅರ್ಧದಷ್ಟು ಪಂದ್ಯದಲ್ಲಿ ಜಯ ಗಳಿಸಿರುವ ರಾಜಸ್ಥಾನ್ ರಾಯಲ್ಸ್ 8 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದೆ.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,753FollowersFollow
0SubscribersSubscribe
- Advertisement -spot_img

Latest Articles