ಮತ್ತದೇ ಕಥೆ; ರಾಜಸ್ಥಾನ್ ವಿರುದ್ಧದ ಸೋಲಿಗೆ ಕಾರಣ ಯಾರೆಂಬುದನ್ನು ತಿಳಿಸಿದ ಕೆಎಲ್ ರಾಹುಲ್

0
229

ಇದೇ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಆರಂಭವಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊರೋನಾವೈರಸ್ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡು ಮುಂದೂಡಲ್ಪಟ್ಟಿತ್ತು.

ಹೀಗೆ ತಾತ್ಕಾಲಿಕವಾಗಿ ಸ್ಥಗಿತಗೊಂಡು ಮುಂದೂಡಲ್ಪಟ್ಟಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉಳಿದ ಪಂದ್ಯಗಳನ್ನು ನಡೆಸಲು ಟೂರ್ನಿಯನ್ನು ಇದೀಗ ಯುಎಇಗೆ ಸ್ಥಳಾಂತರಿಸಲಾಗಿದ್ದು ಇದೇ ಸೆಪ್ಟೆಂಬರ್ 19ರ ಭಾನುವಾರದಿಂದ ಈ ಬಾರಿಯ ಐಪಿಎಲ್ ಟೂರ್ನಿಯ ದ್ವಿತೀಯ ಭಾಗ ಆರಂಭವಾಗಿದೆ. ಹೌದು, ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ದ್ವಿತೀಯ ಹಂತ ಆರಂಭವಾಗಿದ್ದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 21ರ ಮಂಗಳವಾರದಂದು ನಡೆದ ಟೂರ್ನಿಯ 32ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಸೆಣಸಾಟ ನಡೆಸಿದವು. ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಮೊದಲು ಬೌಲಿಂಗ್ ಮಾಡುವ ಆಯ್ಕೆಯನ್ನು ಮಾಡಿಕೊಂಡರು. ಇನ್ನು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಪರ ತಂಡದ ಆರಂಭಿಕ ಆಟಗಾರರಾದ ಎವಿನ್ ಲೆವಿಸ್ ಮತ್ತು ಯಶಸ್ವಿ ಜೈಸ್ವಾಲ್ ಪವರ್‌ಪ್ಲೇನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ರಾಜಸ್ಥಾನ್ ರಾಯಲ್ಸ್ ಪರ ಎವಿನ್ ಲೆವಿಸ್ 36, ಯಶಸ್ವಿ ಜೈಸ್ವಾಲ್ 49, ಲಿಯಾಮ್ ಲಿವಿಂಗ್‌ಸ್ಟನ್ 25 ಮತ್ತು ಮಹಿಪಾಲ್ ಲೊಮ್ರಾರ್ 43 (17 ಎಸೆತಗಳಲ್ಲಿ) ರನ್ ಬಾರಿಸಿದ ಕಾರಣ ತಂಡವು 20 ಓವರ್‌ಗಳಲ್ಲಿ 185 ರನ್‌ಗಳಿಗೆ ಆಲ್ ಔಟ್ ಆಯಿತು.

ಇನ್ನು ರಾಜಸ್ಥಾನ್ ರಾಯಲ್ಸ್ ನೀಡಿದ 186 ರನ್‌ಗಳ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಪರ ಆರಂಭಿಕ ಆಟಗಾರರಾದ ಕೆ ಎಲ್ ರಾಹುಲ್ (49) ಮತ್ತು ಮಯಾಂಕ್ ಅಗರ್ವಾಲ್ (67) ಅತ್ಯದ್ಭುತ ಓಪನಿಂಗ್ ಮಾಡಿದರು. ಹೀಗೆ ಉತ್ತಮ ಆರಂಭ ಪಡೆದುಕೊಂಡ ಪಂಜಾಬ್ ಕಿಂಗ್ಸ್ ಇನ್ನೂ ಒಂದೆರಡು ಓವರ್‌ಗಳು ಬಾಕಿ ಇರುವಾಗಲೇ ಜಯಭೇರಿ ಬಾರಿಸಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಕೊನೆಯ ಹಂತದಲ್ಲಿ ಎಡವಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತು. ಈ ಮೂಲಕ ರಾಜಸ್ಥಾನ್ ರಾಯಲ್ಸ್ 2 ರನ್‌ಗಳ ರೋಚಕ ಜಯವನ್ನು ಸಾಧಿಸಿತು.ಹೀಗೆ ಗೆಲ್ಲುವ ಪಂದ್ಯವನ್ನು ಕೈ ಚೆಲ್ಲಿದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಪಂದ್ಯ ಮುಗಿದ ನಂತರ ಮಾತನಾಡಿದ್ದು ಸೋಲಿಗೆ ಕಾರಣವೇನೆಂಬುದನ್ನು ಈ ಕೆಳಕಂಡಂತೆ ವಿವರಿಸಿದ್ದಾರೆ.

ಈ ರೀತಿಯ ಆಟದ ಅನುಭವ ನಮಗೆ ಮೊದಲೇ ಇತ್ತು
ಪಂಜಾಬ್ ಕಿಂಗ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯವನ್ನು ಸುಲಭವಾಗಿ ಗೆಲ್ಲಲಿದೆ, ಇನ್ನೂ ಒಂದೆರಡು ಓವರ್ ಬಾಕಿ ಇರುವಾಗಲೇ ಪಂಜಾಬ್ ಕಿಂಗ್ಸ್ ತಂಡ ಗೆಲುವು ಸಾಧಿಸಲಿದೆ ಎಂದೆಲ್ಲಾ ಊಹೆಗಳನ್ನು ಮಾಡಲಾಗುತ್ತಿತ್ತು ಆದರೆ ಕೊನೆಯ ಹಂತದಲ್ಲಿ ಎಡವಿದ ಪಂಜಾಬ್ ಕಿಂಗ್ಸ್ ಸೋಲುಂಡಿತು. ಈ ಕುರಿತು ಮಾತನಾಡಿರುವ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಈ ರೀತಿಯ ಪಂದ್ಯಗಳ ಅನುಭವ ನಮಗೆ ಈ ಹಿಂದೆಯೇ ಆಗಿದೆ, 18ನೇ ಓವರ್‌ನಲ್ಲಿ ಪಂದ್ಯವನ್ನು ಮುಗಿಸುವ ಯೋಜನೆಯಲ್ಲಿದ್ದೆವು ಆದರೆ ಎಷ್ಟೇ ಪ್ರಯತ್ನಿಸಿದರೂ ಪಂದ್ಯ ಕೊನೆಯ ಹಂತದಲ್ಲಿ ನಮ್ಮ ಕೈತಪ್ಪಿತು. ನಮಗೆ ಈ ಹಿಂದಿನ ಪಂದ್ಯಗಳಲ್ಲಿ ಇಂತಹ ಅನುಭವ ಇದ್ದರೂ ಸಹ ಪಾಠವನ್ನು ಕಲಿತಿಲ್ಲ ಎಂದು ಹೇಳುವ ಮೂಲಕ ತಂಡದ ಎಲ್ಲಾ ಆಟಗಾರರೂ ಈ ಸೋಲಿಗೆ ಹೊಣೆ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.

ಮುಂದಿನ ಪಂದ್ಯಗಳನ್ನು ಗೆಲ್ಲುವ ಭರವಸೆ ವ್ಯಕ್ತಪಡಿಸಿದ ರಾಹುಲ್
ಹೀಗೆ ಪಂದ್ಯದ ಸೋಲಿಗೆ ತಂಡದ ಎಲ್ಲ ಆಟಗಾರರು ಹೊಣೆ ಎಂಬರ್ಥದಲ್ಲಿ ಮಾತನಾಡಿದ ಕೆಎಲ್ ರಾಹುಲ್ ಉಳಿದಿರುವ 5 ಪಂದ್ಯಗಳನ್ನು ಗೆಲ್ಲುವ ಭರವಸೆಯನ್ನು ವ್ಯಕ್ತಪಡಿಸಿದರು. ಹೌದು, ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಗೆಲುವು ಸಾಧಿಸಿ ಮತ್ತೆ ಯಶಸ್ಸಿನ ಹಾದಿಗೆ ಮರಳುತ್ತೇವೆ ಎಂಬ ವಿಶ್ವಾಸವನ್ನು ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ವ್ಯಕ್ತಪಡಿಸಿದರು.

ಸುಲಭವಾಗಿ ಗೆಲ್ಲುವ ಪಂದ್ಯ ಕೈಚೆಲ್ಲಿದ ಪಂಜಾಬ್
ಹೌದು ರಾಜಸ್ಥಾನ್ ವಿರುದ್ಧದ ಪಂದ್ಯವನ್ನು ಪಂಜಾಬ್ ಕಿಂಗ್ಸ್ ತಂಡ ಸುಲಭವಾಗಿ ಗೆಲ್ಲಲಿದೆ ಎಂದೇ ಎಲ್ಲರೂ ಭಾವಿಸಿದ್ದರು. 120 ರನ್‌ಗಳವರೆಗೂ ಯಾವುದೇ ವಿಕೆಟ್ ಕಳೆದುಕೊಳ್ಳದೆ ಉತ್ತಮ ಹಂತದಲ್ಲಿದ್ದ ಪಂಜಾಬ್ ಕಿಂಗ್ಸ್ 18 ಅಥವಾ 19 ಓವರ್‌ಗಳಲ್ಲಿ ಗೆಲುವಿನ ಗುರಿ ಮುಟ್ಟಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅಂತಿಮ 3 ಓವರ್‌ಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್‌ಗಳ ಅದ್ಬುತ ಪ್ರದರ್ಶನದಿಂದ ಪಂದ್ಯ ಕೊನೆಯ ಓವರ್‌ಗೆ ತಲುಪಿತು, 6 ಎಸೆತಗಳಿಗೆ 4 ರನ್‌ಗಳ ಅಗತ್ಯತೆ ಇತ್ತು. ಆದರೆ ಕೊನೆಯ ಓವರ್ ಬೌಲಿಂಗ್ ಮಾಡಿದ ರಾಜಸ್ಥಾನ್ ತಂಡದ ಬೌಲರ್ ಕಾರ್ತಿಕ್ ತ್ಯಾಗಿ ಕೊನೆ ಓವರ್‌ನಲ್ಲಿ ಕೇವಲ 1 ರನ್ ನೀಡಿ 2 ವಿಕೆಟ್ ಪಡೆದು ಪಂಜಾಬ್ ತಂಡವನ್ನು ಸೋಲಿನೆಡೆಗೆ ತಳ್ಳಿದರು. ಹೀಗೆ ಅಂತಿಮ ಹಂತದವರೆಗೂ ಸುಲಭವಾಗಿ ಗೆಲ್ಲುವ ಅವಕಾಶವನ್ನು ಹೊಂದಿದ್ದ ಪಂಜಾಬ್ ಕಿಂಗ್ಸ್ ತಂಡ ಕೊನೆಯ ಹಂತದಲ್ಲಿ ಪಂದ್ಯವನ್ನು ಕೈಚೆಲ್ಲಿತು.

Previous articleಮದ್ಯ ಸೇವಿಸಿದ ವ್ಯಕ್ತಿ ಚರಂಡಿಗೆ ಬಿದ್ದು ಸಾವು
Next articleಪಂಜಾಬ್ ತಂಡಕ್ಕೆ ಮಣ್ಣು ಮುಕ್ಕಿಸಿ ಹೀರೋಗಳಾದ ರಾಜಸ್ಥಾನ್ ರಾಯಲ್ಸ್‌ನ ಇಬ್ಬರು ಆಟಗಾರರಿವರು

LEAVE A REPLY

Please enter your comment!
Please enter your name here