ಕಳೆದೊಂದು ವಾರದಿಂದ ಕ್ರಿಕೆಟ್ ಜಗತ್ತಿನಲ್ಲಿ ಅತಿ ಹೆಚ್ಚಾಗಿ ಚರ್ಚೆಗೀಡಾಗಿರುವ ವಿಷಯವೆಂದರೆ ಅದು ಭಾರತ ತಂಡದ ನಾಯಕನ ಬದಲಾವಣೆಯ ವಿಚಾರ. ಹೌದು, ಕಳೆದೊಂದು ವಾರದ ಹಿಂದಷ್ಟೇ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕ ಸ್ಥಾನದಿಂದ ಕೆಳಗಿಳಿಯಲಿದ್ದು ರೋಹಿತ್ ಶರ್ಮಾ ನೂತನ ನಾಯಕನಾಗಿ ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹರಿದಾಡಿತ್ತು. ಈ ರೀತಿಯ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಪ್ರತಿಕ್ರಿಯಿಸಿದ ಬಿಸಿಸಿಐ ಯಾವುದೇ ಕಾರಣಕ್ಕೂ ನಾಯಕನ ಬದಲಾವಣೆ ಮಾತೇ ಇಲ್ಲ ಎಂದು ಹರಿದಾಡಿದ ಎಲ್ಲ ಸುದ್ದಿಗಳನ್ನು ತಳ್ಳಿಹಾಕಿತ್ತು.
ವಿರಾಟ್ ಕೊಹ್ಲಿಯವರೇ ಮುಂದಿನ ದಿನಗಳಲ್ಲಿಯೂ ಭಾರತ ತಂಡದ ನಾಯಕನಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಬಿಸಿಸಿಐ ಹೇಳಿಕೆಯನ್ನು ನೀಡಿತ್ತು, ಬಿಸಿಸಿಐ ನೀಡಿದ ಈ ಹೇಳಿಕೆ ವಿರಾಟ್ ಕೊಹ್ಲಿ ಅಭಿಮಾನಿಗಳಲ್ಲಿ ತೃಪ್ತಿಯನ್ನು ತಂದಿತ್ತು. ಆದರೆ ಕೆಲವೇ ದಿನಗಳಲ್ಲಿ ಸ್ವತಃ ವಿರಾಟ್ ಕೊಹ್ಲಿಯವರೇ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ತಾನು ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವ ವಿಷಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡರು. ಪತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದರ ಮೂಲಕ ತಾವು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಬಳಿಕ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಲಿದ್ದು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ತಂಡಗಳ ನಾಯಕನಾಗಿ ಮುಂದುವರಿಯುವುದಾಗಿ ತಿಳಿಸಿದ್ದರು.
ವಿರಾಟ್ ಕೊಹ್ಲಿ ಈ ರೀತಿಯ ನಿರ್ಧಾರವನ್ನು ಪ್ರಕಟಿಸಿದ ಕೂಡಲೇ ಹಲವಾರು ಮಾಜಿ ಕ್ರಿಕೆಟಿಗರು ಕೊಹ್ಲಿ ತೆಗೆದುಕೊಂಡ ನಿರ್ಧಾರದ ಕುರಿತು ತಮ್ಮ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸತೊಡಗಿದರು. ಇದೀಗ ವಿರಾಟ್ ಕೊಹ್ಲಿ ಬಾಲ್ಯದ ತರಬೇತುದಾರ ರಾಜ್ ಕುಮಾರ್ ಶರ್ಮಾ ಕೂಡ ವಿರಾಟ್ ಕೊಹ್ಲಿ ಟಿ ಟ್ವೆಂಟಿ ತಂಡದ ನಾಯಕತ್ವಕ್ಕೆ ರಾಜಿನಾಮೆ ಸಲ್ಲಿಸಲು ತೆಗೆದುಕೊಂಡಿರುವ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ್ದು ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾಗಿರುವುದರ ಹಿಂದಿನ ನಿಜವಾದ 2 ಕಾರಣಗಳನ್ನು ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.
ಹೆಚ್ಚಿನ ಒತ್ತಡವೇ ರಾಜೀನಾಮೆ ನಿರ್ಧಾರಕ್ಕೆ ಕಾರಣ
ವಿರಾಟ್ ಕೊಹ್ಲಿ ಭಾರತಕ್ಕೆ ಟ್ವೆಂಟಿ ತಂಡಕ್ಕೆ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ರಾಜೀನಾಮೆ ಸಲ್ಲಿಸಲು ಮುಂದಾಗಿರುವುದರ ಹಿಂದಿನ 2 ನಿಖರವಾದ ಕಾರಣಗಳನ್ನು ಬಿಚ್ಚಿಟ್ಟಿರುವ ಕೊಹ್ಲಿಯ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮಾ ವಿರಾಟ್ ಕೊಹ್ಲಿಗೆ ಉಂಟಾಗಿದ್ದ ಅಧಿಕ ಒತ್ತಡವೇ ರಾಜಿನಾಮೆಗೆ ಪ್ರಮುಖವಾದ ಕಾರಣ ಎಂದು ಹೇಳಿಕೆ ನೀಡಿದ್ದಾರೆ. ವಿರಾಟ್ ಕೊಹ್ಲಿಗೆ ದೊಡ್ಡ ಮಟ್ಟದ ಒತ್ತಡವಿತ್ತು, ಈ ಹಿಂದೆ ತನ್ನ ಜೊತೆ ಟಿ ಟ್ವೆಂಟಿ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಯುವುದಾಗಿ ಸಾಕಷ್ಟು ಬಾರಿ ಚರ್ಚಿಸಿದ್ದರು, ನಾನು ಮನವೊಲಿಸುವ ಪ್ರಯತ್ನವನ್ನೂ ಮಾಡಿದ್ದೆ, ಆದರೆ ಒತ್ತಡ ದಿನೇ ದಿನೇ ಹೆಚ್ಚಾಗುತ್ತಿದ್ದು ಈ ನಿರ್ಧಾರವನ್ನು ಕೈಗೊಳ್ಳಲೇಬೇಕಾಗಿದೆ ಎಂದು ವಿರಾಟ್ ಕೊಹ್ಲಿ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದರು ಎಂದು ರಾಜ್ ಕುಮಾರ್ ಶರ್ಮಾ ತಿಳಿಸಿದ್ದಾರೆ.
ಕುಟುಂಬಕ್ಕೆ ಸಮಯ ನೀಡಲಾಗುತ್ತಿಲ್ಲ ಎಂಬುದು ಮತ್ತೊಂದು ಕಾರಣ
ಭಾರತ ಟೆಸ್ಟ್, ಏಕದಿನ ಮತ್ತು ಟಿ ಟ್ವೆಂಟಿ ಮೂರೂ ವಿಭಾಗಗಳ ನಾಯಕನಾಗಿದ್ದ ವಿರಾಟ್ ಕೊಹ್ಲಿಗೆ ತಮ್ಮ ಕುಟುಂಬಸ್ಥರ ಜೊತೆ ಕಾಲ ಕಳೆಯಲು ಸಮಯವೇ ಸಿಗುತ್ತಿರಲಿಲ್ಲವಂತೆ. ದೇಶಕ್ಕೆ ಓರ್ವ ಆಟಗಾರನಾಗಿ ಎಷ್ಟು ಮುಖ್ಯವೋ ಅದೇ ರೀತಿ ಕುಟುಂಬಕ್ಕೂ ಕೂಡ ವಿರಾಟ್ ಕೊಹ್ಲಿ ಸಮಯ ನೀಡಬೇಕಾದದ್ದು ಅಷ್ಟೇ ಮುಖ್ಯವಾಗಿರುತ್ತದೆ. ಹೀಗಾಗಿ ಮೂರೂ ವಿಭಾಗಗಳ ನಾಯಕನಾಗಿ ಕೆಲಸ ನಿರ್ವಹಿಸುವುದರಿಂದ ಕುಟುಂಬ ಸದಸ್ಯರ ಜತೆ ಸಮಯ ಕಳೆಯುವುದಕ್ಕೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ವಿರಾಟ್ ಕೊಹ್ಲಿ ಟಿ ಟ್ವೆಂಟಿ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ರಾಜ್ ಕುಮಾರ್ ಶರ್ಮಾ ತಿಳಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಕೊಹ್ಲಿ ರಾಜೀನಾಮೆ ನೀಡುತ್ತಾರೆ ಎಂದು ರಾಜ್ ಕುಮಾರ್ ಶರ್ಮಾ ಈ ಹಿಂದೆಯೇ ಹೇಳಿದ್ದರು!
ವಿರಾಟ್ ಕೊಹ್ಲಿ ಟಿ ಟ್ವೆಂಟಿ ತಂಡದ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವಕ್ಕೂ ಕೂಡ ರಾಜೀನಾಮೆಯನ್ನು ಸಲ್ಲಿಸಲಿದ್ದಾರೆ ಎಂದು ಈ ಹಿಂದೆ ರಾಜ್ ಕುಮಾರ್ ಶರ್ಮಾ ಹೇಳಿಕೆ ನೀಡಿದ್ದರು. ಆದರೆ ರಾಜ್ ಕುಮಾರ್ ಶರ್ಮಾ ಹೇಳಿಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಹೀಗೆ ರಾಜ್ ಕುಮಾರ್ ಶರ್ಮಾ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಭವಿಷ್ಯ ನುಡಿದ ಕೆಲವೇ ದಿನಗಳಲ್ಲಿ ಕೊಹ್ಲಿ ಬೆಂಗಳೂರು ತಂಡದ ನಾಯಕತ್ವಕ್ಕೆ ಈ ಬಾರಿಯ ಐಪಿಎಲ್ ಮುಗಿದ ನಂತರ ರಾಜಿನಾಮೆ ನೀಡುವುದಾಗಿ ಹೇಳಿಕೆಯನ್ನು ನೀಡಿದ್ದಾರೆ.