ಟೋಕಿಯೊ- ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರು ಟೋಕಿಯೊ ಒಲಿಂಪಿಕ್ಸ್ 2020 ಯಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಸಾಧನೆ ಮಾಡಿರುವ ಸಿಂಧು ತಮ್ಮ ಮುಡಿಗೆ ಮತ್ತೊಂದು ಒಲಿಂಪಿಕ್ಸ್ ಗರಿ ಪಡೆದರು. ಆದರೆ ಅವರು ಬಯಿಸಿದ ಬಣ್ಣ ಅವರ ಪಾಲಿಗೆ ಲಭಿಸಲಿಲ್ಲ ಎಂಬುದೊಂದೆ ನಿರಾಸೆ. ಸೆಮಿಫೈನಲ್ಸ್ ನಲ್ಲಿ ಸಿಂಧು ಸೋಲು ಕಂಡಿದ್ದರಿಂದ ಸಿಂಧು ಇಂದು ಮೂರನೇ ಸ್ಥಾನಕ್ಕಾಗಿ ಕಾದಾಟ ನಡೆಸಿ, ಜಯ ಸಾಧಿಸಿದರು.
ಸಿಂಧು 21-13, 21-15 ಹಿ ಬಿಂಗ್ ಜೋಯ್ ಅವರನ್ನು ಮಣಿಸಿ ಕಂಚಿಗೆ ಕೊರಳೊಡ್ಡಿದರು. ಭರ್ಜರಿ ಪ್ರದರ್ಶನ ನೀಡಿದ ಸಿಂಧು ಎರಡು ನೇರ ಸೆಟ್ ಗಳಲ್ಲಿ ಎದುರಾಳಿ ಆಟಗಾರ್ತಿಯನ್ನು ಮಣಿಸಿ ಮುನ್ನಡೆ ಸಾಧಿಸಿದರು. 53 ನಿಮಿಷಗಳ ಕಾದಾಟದಲ್ಲಿ ಭಾರತದ ಆಟಗಾರ್ತಿ ಸತತ ಎರಡನೇ ಪದಕ ಪಡೆದು ಬೀಗಿದರು.
ಆರಂಭದಿಂದಲೂ ಮುನ್ನಡೆ ಸಾಧಿಸಿದ್ದ ಸಿಂಧು ಎದುರಾಳಿ ಆಟಗಾರ್ತಿಯ ನಡೆಯನ್ನು ಅರಿತು ಆಡಿದರು. ಪರಿಣಾಮ ಮೊದಲ ಗೇಮ್ ನಲ್ಲಿ 11-8 ರಿಂದ ಮುನ್ನಡೆ ಸಾಧಿಸಿದರು. ಅಲ್ಲದೆ ಸುಲಭವಾಗಿ 21-13 ರಿಂದ ಗೆದ್ದು ಬೀಗಿದರು.
ಎರಡನೇ ಗೇಮ್ ನಲ್ಲೂ ಸಮಯೋಚಿತ ಆಟವಾಡಿದ ಸಿಂಧು ಮೊದಲಾವಧಿಯಲ್ಲಿ ಹಿಡಿತ ಸಾಧಿಸಿದರು. ಮುಂದೆ ಹಿಂತಿರುಗಿ ನೋಡದ ಸಿಂಧು ಅಂಕಗಳನ್ನು ಕಲೆ ಹಾಕುತ್ತಾ ಸಾಗಿ ಕಂಚು ಗೆದ್ದರು.