ಮಾನ್ವಿ:ಮಾನ್ವಿ ಪುರಸಭೆ ಕಚೇರಿಯಲ್ಲಿನ ದಾಖಲೆಗಳ ಕೊಠಡಿಯಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಬೆಂಕಿ ಕಾಣಿಸಿಕೊಂಡು 30 ವರ್ಷಗಳಷ್ಟು ಹಳೆಯದಾದ ಕೆಲ ಮಹತ್ವದ ದಾಖಲೆಗಳು ಸುಟ್ಟು ಭಸ್ಮವಾಗಿರುವ ಘಟನೆ ಗುರುವಾರ ಬೆಳಿಗ್ಗೆ ಜರುಗಿದೆ.
ದಾಖಲೆಗಳ ಕೊಠಡಿಯಲ್ಲಿ ಹಠಾತ್ತಾಗಿ ಬೆಂಕಿ ಹೊತ್ತಿಕೊಂಡು ಹೊಗೆಯಾಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.
ಅನಾಹುತ ತಪ್ಪಿದೆ ಃ ಪುರಸಭೆ ಕಚೇರಿ ದಾಖಲೆಗಳ ಕೊಠಡಿಯಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಕೊಠಡಿಯಲ್ಲಿನ ಖಾತಾ ನಕಲು, ಮುಟೇಷನ್, ಕಟ್ಟಡ ಅನುಮತಿ ಪತ್ರಗಳು ಸೇರಿದಂತೆ ಕೆಲ ದಾಖಲೆಗಳು ಸುಟ್ಟು ಹೋಗಿದ್ದು ಕಚೇರಿ ಅವರಣದಲ್ಲಿದ್ದ ಸಾರ್ವಜನಿಕರ ಬೆಂಕಿ ಅವಘಡವನ್ನು ಗಮನಿಸಿ ಸಮಯ ಪ್ರಜ್ಞೆ ಮೆರೆದಿದ್ದರಿಂದ ಇನ್ನೂ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಜಗದೀಶ ಭಂಡಾರಿ ತಿಳಿಸಿದರು.
ಶಾರ್ಟ್ ಸಕ್ರ್ಯೂಟ್‍ನಿಂದ ಉಂಟಾದ ಅಗ್ನಿ ಪ್ರಮಾದದಲ್ಲಿ ಸುಟ್ಟು ಹೋಗುತ್ತಿದ್ದ ದಾಖಲೆಗಳ ಉಳಿಸಿಕೊಳ್ಳಲು ಅಗ್ನಿಶಾಮಕ ದಳ ಹಾಗೂ ಪುರಸಭೆ ಸದಸ್ಯರು, ಸಿಬ್ಬಂದಿಗಳು, ಸಾರ್ವಜನಿಕರು ಹರಸಾಹಸಪಟ್ಟರು.
ಪುರಸಭೆ ಕಚೇರಿಯಲ್ಲಿನ ದಾಖಲೆಗಳ ಕೊಠಡಿಯಲ್ಲಿ ಸಂಭವಿಸಿದ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸ್ಥಳ ಪರಿಶೀಲನೆ ಕೈಗೊಂಡು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.