ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಡುವೆ, ದೇಶದೆಲ್ಲೆಡೆ ಎಲೆಕ್ಟ್ರಾನಿಕ್ ವಾಹನಗಳು ದಿನದಿಂದ ದಿನಕ್ಕೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತಲೇ ಇವೆ. ಕರ್ನಾಟಕವು ಇವಿ ವಾಹನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಬಳಕೆ ಖರ್ಚು ಕಡಿಮೆ ಮಾಡುವ ಜೊತೆಗೆ ಎಲೆಕ್ಟ್ರಾನಿಕ್ ವಾಹನಗಳು ಪರಿಸರ ಸ್ನೇಹಿ, ವಾಯುಮಾಲಿನ್ಯ ನಿಯಂತ್ರಣದಲ್ಲೂ ಪರಿಣಾಮಕಾರಿಯಾಗಲಿದೆ. ಹೀಗಾಗಿ ಸರ್ಕಾರವು ಇವಿ ವಾಹನಗಳ ಬಳಕೆಗೆ ಸಾಕಷ್ಟು ಉತ್ತೇಜನ ನೀಡುತ್ತಿದ್ದು, ಜನರು ಸಹ ಇವಿ ವಾಹನಗಳ ಕಡೆಗೆ ಒಲವು ಹೆಚ್ಚಿಸಿಕೊಂಡಿದ್ದಾರೆ.
ವಾಹನ ತಯಾರಿಕಾ ಕಂಪೆನಿಗಳೂ ಇವಿ ತಯಾರಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿವೆ. ಪ್ರೀ ಬುಕ್ಕಿಂಗ್ ಇರುವವರಿಗೆ ವಾಹನ ಒದಗಿಸಲು ಹೆಣಗಾಡುವಂತಹ ರೀತಿಯಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ದೇಶದ ಎಲ್ಲ ಭಾಗಗಳಲ್ಲಿಯೂ ಇವಿ ಬಳಕೆ ಹೆಚ್ಚುತ್ತಿದೆ. ಕರ್ನಾಟಕವು ಇದಕ್ಕೆ ಹೊರತಾಗಿಲ್ಲ. ಈಗಾಗಲೇ ೧ ಲಕ್ಷಕ್ಕೂ ಹೆಚ್ಚು ಇವಿ ವಾಹನಗಳು ನೋಂದಣಿಯಾಗಿವೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.