ಬಳ್ಳಾರಿ: ಸಂಡೂರು ತಾಲ್ಲೂಕು ಸಂಡೂರು ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಹಿಂಭಾಗದಲ್ಲಿನ ಸರ್ಕಾರಿ ಭೂಮಿಯನ್ನು ಸುಮಾರು 60-70ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಬಡರೈತರನ್ನು ಒಕ್ಕಲೆಬ್ಬಿಸಬಾರದು ಎಂದು ಧಾರವಾಡ ಉಚ್ಚ ನ್ಯಾಯಲಯ ನಿರ್ದೇಶನವಿದ್ದರು ಸಹ ಅರಣ್ಯ ಮತ್ತು ಕಂದಾಯ ಇಲಾಖೆಯು ಬಡರೈತರನ್ನು ಒಕ್ಕಲೆಬ್ಬಿಸಿರುವುದು ಖಂಡನೀಯ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಹಾಗೂ ವಕೀಲರಾದ ವಿರುಪಾಕ್ಷಪ್ಪ ಅವರು ಪ್ರತಿಪಾಧಿಸಿದರು.
ನಗರದ ಪತ್ರಿಕಾಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತ ಬಂದಿರುವ ಸುಮಾರು 24 ಕುಟುಂಬಗಳಿಗೆ ಅನ್ಯಾಯವಾಗಿದೆ ಆ ಭೂಮಿಯಲ್ಲಿ ತಮ್ಮ ಪೂರ್ವಜರು ಹೂತಿಟ್ಟ ಸಮಾಧಿಗಳು ಸಹ ಇವೆ. ಈಗ ಪಟ್ಟಾಭದ್ರ ಹಿತಾಸಕ್ತಿಗಳು ಈ ಬಡ ರೈತ ಕುಟುಂಬಗಳನ್ನು ಒಕ್ಕೆಲೆಬ್ಬಿಸುವ ಕೆಲಸ ಮಾಡುತ್ತಿವೆ ಹಾಗೂ ರೈತರ ಪರ ಹೋರಾಟ ಮಾಡಿದ ರೈತ ಮುಖಂಡರ ಮೇಲೆ ಸುಳ್ಳು ಕ್ರಿಮಿನಲ್ ಮೊಕದ್ದಮೆಯನ್ನು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯಲಯದ ನಿರ್ದೇಶನ: ಈ ವಿಚಾರವಾಗಿ ಮಾನ್ಯ ಧಾರವಾಡ ಉಚ್ಚ ನ್ಯಾಯಲಯದಲ್ಲಿ ಸದರಿ ಬಡ ರೈತರು ರಿಟ್ ಪಿಟಿಷನ್ ಹಾಕಿದ್ದು ಕೇಸ್ ಸಂಖ್ಯೆ-103725/2017(ಕೆ.ಎಲ್.ಆರ್.) ಸದರಿ ಉಚ್ಚ ನ್ಯಾಯಲಯ ಬಳ್ಳಾರಿ ಸಹಾಯಕ ಆಯುಕ್ತರಿಗೆ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಿರಿ ಎಂದು ನಿರ್ದೇಶನ ಸಹ ಮಾಡಿದ್ದಾರೆ.
ನ್ಯಾಯ ದೊರಕಿಲ್ಲ: ಉಚ್ಚ ನ್ಯಾಯಲಯದ ಆದೇಶದಂತೆ ನಮಗೆ ನ್ಯಾಯ ಕೊಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮತ್ತು ಸಹಾಯಕ ಆಯುಕ್ತರಿಗೆ ಅರ್ಜಿ ಸಲ್ಲಿಸಿದರು ರೈತರಿಗೆ ನ್ಯಾಯ ದೊರಕಿರುವುದಿಲ್ಲ.
ಅನಿರ್ಧಿಷ್ಠಾವಧಿ ಧರಣಿ:ರೈತ ಸಂಘದ ಮುಂಡರಿಂದ ಸಹ ರೈತರಿಗೆ ನ್ಯಾಯ ಕೊಡಿಸುವಂತೆ ಸಂಡೂರಿನ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ಅನೇಕ ಮನವಿ ಸಲ್ಲಿಸಿದರು ನ್ಯಾಯ ದೊರಕಿರುವುದಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ಧಿಷ್ಠಾವಧಿ ಧರಣಿ ನಡೆಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದಘ ಜಿಲ್ಲಾ ಸಮಿತಿ ಅಧ್ಯಕ್ಷರಾದ ವಿ.ಎಸ್ ಶಿವಶಂಕರ್ ಸೇರಿದಂತೆ ಭೂಮಿಯನ್ನು ಕಳೆದುಕೊಂಡ ಜಯಭೂನ್ ಭೀ, ಅಬ್ದುಲ್ ಸಾಬ್, ಎನ್ ಕ್ರಿಷ್ಣಪ್ಪ, ಕೆ.ಕುಮಾರಪ್ಪ, ಹಂಪಮ್ಮ, ಯುನಿಸಾಬ್, ಪಿ. ಹುಸೇನ್ ಪೀರಾ, ಯಲ್ಲಮ್ಮ ಮರಾಠಿ, ಮೆಹರೂನ್ ಭೀ, ಎ. ಸ್ವಾಮಿ, ಪೀರಾಸಾಬ್, ಹುಲುಗಪ್ಪ. ಇನ್ನಿತರರು ಇದ್ದರು.