ಬೆಂಗಳೂರು: ಪಂಚಮಸಾಲಿ ಸಮುದಾಯದ ಮೀಸಲಾತಿ ಸಂಬAಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹೋರಾಟಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ. ಇನ್ನೆರಡು ತಿಂಗಳಲ್ಲಿ ಸಮುದಾಯದ ಬೇಡಿಕೆ ಈಡೇರಿಸುವುದಾಗಿ ಸರಕಾರ ಭರವಸೆ ನೀಡಿದ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಿಸಿ ಪಾಟೀಲ್ ನಿವಾಸದಲ್ಲಿ ಸಮುದಾಯದ ಮುಖಂಡರ ಜೊತೆ ನಡೆದ ಮಹತ್ವದ ಸಭೆಯಲ್ಲಿ ಸಿಸಿ ಪಾಟೀಲ್ ಮಾತನಾಡಿ, ೭೫೦ ಕಿಲೋಮೀಟರ್ ಪಾದಯಾತ್ರೆ ನಡೆದಿದೆ. ಬೆಂಗಳೂರಿನಲ್ಲಿ ಜಯಮೃತ್ಯುಂಜಯಶ್ರೀ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆದಿತ್ತು. ಮೀಸಲಾತಿ ಸಾಧ್ಯವೇ ಎಂಬ ಅನುಮಾನ ಇತ್ತು. ಆದರೆ ಛಲಬಿಡದೆ ಹೋರಾಟ ಮುನ್ನಡೆಸಿದ್ರು. ಹೋರಾಟದ ಪರವಾಗಿ ಸಿಹಿಸುದ್ದಿ ಬರಲಿದೆ. ಸ್ವಲ್ಪ ದಿನಗಳಲ್ಲೇ ಸಿಹಿ ಸುದ್ದಿ ಸಿಗಲಿದೆ. ಹೋರಾಟಕ್ಕೆ ಹಲವರು ಸಹಕಾರ ಕೊಟ್ಟಿದ್ದರು. ಅರಮನೆ ಮೈದಾನದಲ್ಲಿ ಸಭೆಗೆ ಅನುಮತಿಯಿಲ್ಲದಿದ್ದರೂ ಸಭೆಗೆ ಅಂದು ಬೊಮ್ಮಾಯಿ ಅವಕಾಶ ಕೊಟ್ಟಿದ್ರು . ೨-ಎ ಮೀಸಲಾತಿ ತಕ್ಷಣವೇ ಕೊಡಲು ಸಾಧ್ಯವಿಲ್ಲ. ನಾವು ಎಷ್ಟೇ ಹೋರಾಟ ಮಾಡಿದ್ರೂ ಸರ್ಕಾರ ಮನಸ್ಸು ಮಾಡದಿದ್ದರೆ ಏನೂ ಅಗಲ್ಲ. ಹಾಗಾಗಿ ಸ್ವಲ್ಪ ದಿನ ತಾಳ್ಮೆಯಿಂದ ಕಾಯೋಣ. ಎರಡು ತಿಂಗಳಲ್ಲಿ ಉತ್ತಮ ಫಲಿತಾಂಶ ಬರುತ್ತೆ ಎಂದು ಹೇಳಿದರು.
ಆನಂತರ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿರವರು, ಸಿಎಂ ಭರವಸೆ ಕೊಡುವ ತನಕ ಹೊರಟ ಕೈ ಬಿಡಲ್ಲ ಎಂದಿದ್ವಿ. ಇದೀಗ ಎರಡು ತಿಂಗಳ ಸಮಯ ಕೇಳಿದ್ದಾರೆ. ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಮುಂದಿನ ಆಗಸ್ಟ್ ೨೨ರಂದು ಮೀಸಲಾತಿ ಕೊಡ್ತೀವಿ ಎಂದು ತಿಳಿಸಿದ್ದಾರೆ ಎಂದರು. ಹೀಗಾಗಿ ಸಿಎಂ ಮನೆ ಮುಂದಿನ ಧರಣಿ ಮುಂದೂಡಲಾಗಿದೆ ಎಂದು ಹೇಳಿದರು.