ಬೆಂಗಳೂರು: ಬೆಂಗಳೂರಿಗರ ಎಲ್ಲ ಕನಸುಗಳನ್ನು ನನಸು ಮಾಡಲು ನಾವು ಬದ್ಧರಾಗಿದ್ಧೇವೆ. ನಲವತ್ತು ವರ್ಷ ಚರ್ಚೆಯಲ್ಲಿದ್ದ ಈ ಯೋಜನೆ ಆರಂಭಿಸುವ ಪುಣ್ಯ ನಮಗೆ ಸಿಕ್ಕಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಖುಷಿಪಟ್ಟರು.
ಕೊಮಘಟ್ಟದಲ್ಲಿ 27 ಸಾವಿರ ಕೋಟಿ ವೆಚ್ಚದ ಯೋಜನೆಗಳ ಲೋಕಾರ್ಪಣೆ, ಶಂಕುಸ್ಥಾಪನೆ ನೆರವೇರಿಸಿದ ಮೋದಿ ಅವರು, ರಾಜ್ಯದಲ್ಲಿ ಐದು ನ್ಯಾಷನಲ್ ಹೈವೇ ಯೋಜನೆಗಳು, ಏಳು ರೈಲು ಯೋಜನೆಗಳಿಗೆ ಚಾಲನೆ ಕೊಟ್ಟಿದ್ದೇವೆ. ಹಲವು ಯೋಜನೆಗಳ ಮೂಲಕ ಜನರ ಸೇವೆಗೆ ಅವಕಾಶ ಸಿಕ್ಕಿದೆ, ಸಬರ್ಬನ್ ಯೋಜನೆ ಬಗ್ಗೆ 40 ವರ್ಷದಿಂದ ಚರ್ಚೆ ಮಾತ್ರ ನಡೀತಿತ್ತು. ಹದಿನಾರು ವರ್ಷದವರೆಗೆ ಸಬರ್ಬನ್ ರೈಲು ಯೋಜನೆ ನೆನೆಗುದಿಗೆ ಬಿದ್ದಿತ್ತು. ಈ ಸುವರ್ಣ ಅವಕಾಶ ನಮಗೆ ಸಿಕ್ಕಿದೆ. ಸಬರ್ಬನ್ ರೈಲು ಯೋಜನೆ ಥರವೇ ಬೆಂಗಳೂರು ರಿಂಗ್ ರಸ್ತೆ ಅಗಲೀಕರಣ ಮಾಡಲಿದ್ದೇವೆ. ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಕರ್ನಾಟಕದಲ್ಲಿ 1200 ಕಿ.ಮೀ ಗೂ ಹೆಚ್ಚಿನವರೆಗೆ ವಿವಿಧ ರೈಲು ಕಾಮಗಾರಿ ಮಾಡಲಾಗಿದೆ ಎಂದು ಹೇಳಿದರು.
“ಬೆಂಗಳೂರು ಲಕ್ಷಾಂತರ ಜನರಿಗೆ ಕನಸಿನ ನಗರಿ. ಬೆಂಗಳೂರಿನ ಅಭಿವೃದ್ಧಿ ಲಕ್ಷಾಂತರ ಕನಸುಗಳ ವಿಕಾಸ. ಕೇಂದ್ರದಿಂದ ಬೆಂಗಳೂರು ಅಭಿವೃದ್ಧಿಗೆ ಇನ್ನಷ್ಟು ಉತ್ತೇಜನ ಕೊಡಲಾಗ್ತಿದೆ. ಬೆಂಗಳೂರಿಗೆ ಸಂಚಾರ ದಟ್ಡಣೆಯಿಂದ ಮುಕ್ತಿ ಕೊಡಲು ರೈಲು, ರಸ್ತೆ, ಮೂಲಸೌಕರ್ಯ ಹೆಚ್ಚಿಸಿದ್ದೇವೆ. ಮೂಲಸೌಕರ್ಯ ಕೊಡುವ ಕೆಲಸವನ್ನು ನಮ್ಮ ಡಬಲ್ ಇಂಜಿನ್ ಸರ್ಕಾರ ಮಾಡಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.