ಚಂಡೀಗಢ, ಸೆ 19 (ಯುಎನ್ಐ) ಪಕ್ಷದ ಆಂತರಿಕ ನಿರ್ಧಾರಗಳಿಂದ ಬೇಸತ್ತು ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದು ಇತ್ತೀಚಿನ ಬೆಳವಣಿಗೆಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಪತ್ರದಲ್ಲಿ ಅವರು, ರಾಜ್ಯದಲ್ಲಿ ಇತ್ತೀಚಿಗೆ ನಡೆದಿರುವ ಘಟನೆಗಳು ಪಕ್ಷಕ್ಕೆ ರಾಷ್ಟ್ರಮಟ್ಟದಲ್ಲಿ ಧಕ್ಕೆ ಉಂಟು ಮಾಡುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಮರಿಂದರ್ ಸಿಂಗ್ ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ ತಮ್ಮ ರಾಜೀನಾಮೆ ಕುರಿತು ತಿಳಿಸಿರುವುದಾಗಿ ಅವರ ಮಾಧ್ಯಮ ಸಲಹೆಗಾರ ರವೀನ್ ತುಕ್ರಾಲ್ ಸರಣಿ ಟ್ವೀಟ್‌ಗಳ ಮಾಡಿದ್ದಾರೆ. ಅದರ ಪ್ರಕಾರ ಅಮರಿಂದರ್, “ನನ್ನ ವೈಯಕ್ತಿಕ ನೋವಿನ ಹೊರತಾಗಿಯೂ, ಪಂಜಾಬ್‌ನಲ್ಲಿ ಪಕ್ಷ ಕಷ್ಟಪಟ್ಟು ಸಂಪಾದಿಸಿದ ಶಾಂತಿ ಮತ್ತು ಅಭಿವೃದ್ಧಿಗೆ ಹಾನಿ ಮಾಡುವುದಿಲ್ಲ. ರಾಜ್ಯದ ಜನರ ಅಭಿವೃದ್ಧಿಗಾಗಿ ನನ್ನ ಪ್ರಯತ್ನಗಳು ನಿರಂತರವಾಗಿ ಮುಂದುವರಿಯುತ್ತವೆ” ಎಂದಿದ್ದಾರೆ.
ನವಜೋತ್ ಸಿಂಗ್ ಸಿಧು ಅವರನ್ನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸುವುದರ ವಿರುದ್ಧ ದನಿಯೆತ್ತಿರುವ ಸಿಂಗ್, ಶನಿವಾರ ಅವರನ್ನು ‘ಪಾಕಿಸ್ತಾನದ ಸ್ನೇಹಿತ’ ಎಂದು ಕರೆದಿದ್ದಾರೆ.
ರಾಜೀನಾಮೆ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಂಗ್, ಸಿಧು ಅವರನ್ನು ಉನ್ನತ ಹುದ್ದೆಗೆ ನೇಮಕ ಮಾಡಿದಲ್ಲಿ ಅದು ಅಪಾಯಕಾರಿ ನಿರ್ಧಾರವಾಗಲಿದೆ. ಪಂಜಾಬ್ ರಜ್ಯ ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವುದರಿಂದ ಅದು ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.
“ಪಂಜಾಬ್ ಜನರು ತನ್ನ ಪ್ರೌಢ ಮತ್ತು ಪರಿಣಾಮಕಾರಿ ಸಾರ್ವಜನಿಕ ನೀತಿಗಳಿಗಾಗಿ ಕಾಂಗ್ರೆಸನ್ನು ಬೆಂಬಲಿಸುತ್ತಿದ್ದಾರೆ. ಇದು ಉತ್ತಮ ರಾಜಕೀಯವನ್ನು ಮಾತ್ರ ಪ್ರತಿಬಿಂಬಿಸುತ್ತದೆ, ಎಂದರು.
“ನಾನು ರಾಜ್ಯದಲ್ಲಿ ಕಾನೂನಿನ ನಿಯಮವನ್ನು ಸ್ಥಾಪಿಸಿದ್ದೇನೆ ಮತ್ತು ಪಾರದರ್ಶಕ ಆಡಳಿತವನ್ನು ಖಾತ್ರಿಪಡಿಸಿದ್ದೇನೆ. ರಾಜಕೀಯ ವ್ಯವಹಾರಗಳ ನಿರ್ವಹಣೆಯಲ್ಲಿ ನೈತಿಕ ನಡವಳಿಕೆ ಕಾಪಾಡಿಕೊಂಡಿದ್ದೇನೆ, 2019 ರಲ್ಲಿ ಸಂಸತ್ತಿನ ಚುನಾವಣೆಯಲ್ಲಿ 13 ರಲ್ಲಿ 8 ಸ್ಥಾನಗಳನ್ನು ಗೆದ್ದಿದ್ದೇನೆ” ಎಂದು ಅವರು ಹೇಳಿದರು.