ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಹೊಸ ಕ್ಯಾಂಪಸ್, ‘ವಾಣಿಜ್ಯ ಭವನ’ ಮತ್ತು ನಿರ್ಯಾತ್ ಪೋರ್ಟಲ್ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಕೂಡ ಉಪಸ್ಥಿತರಿದ್ದರು.
ಈ ವೇಳೆ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ, ವಿಶ್ವ ಎದುರಿಸುತ್ತಿರುವ ಸವಾಲುಗಳ ನಡುವೆಯೂ ೪೦೦ ಬಿಲಿಯನ್ ಡಾಲರ್ ಅಂದರೆ ೩೦ ಲಕ್ಷ ಕೋಟಿ ರೂಪಾಯಿಗಳ ಸರಕು ರಫ್ತು ಮೈಲಿಗಲ್ಲನ್ನು ದಾಟಬೇಕು ಎಂದು ಕಳೆದ ವರ್ಷ ದೇಶ ನಿರ್ಧರಿಸಿತ್ತು. ಇದನ್ನೂ ದಾಟಿ ೪೧೮ ಶತಕೋಟಿ ಡಾಲರ್ ಅಂದರೆ ೩೧ ಲಕ್ಷ ಕೋಟಿ ರೂಪಾಯಿ ರಫ್ತು ಮಾಡಿ ಹೊಸ ದಾಖಲೆ ಮಾಡಿದ್ದೇವೆ. ಸರ್ಕಾರದ ಯೋಜನೆಗಳು ವರ್ಷಗಟ್ಟಲೆ ವಿಳಂಬವಾಗಬಾರದು, ನಿಗದಿತ ಸಮಯಕ್ಕೆ ಪೂರ್ಣಗೊಳ್ಳಬೇಕು. ಸರ್ಕಾರದ ಯೋಜನೆಗಳು ಗುರಿ ತಲುಪಿದಾಗ ಮಾತ್ರ ದೇಶದ ತೆರಿಗೆದಾರರಿಗೆ ಗೌರವ ನೀಡಿದಂತೆ ಎಂದು ಪ್ರಧಾನಿ ತಿಳಿಸಿದರು.