ಬಳ್ಳಾರಿ: ಮಸೀದಿ ಹಾಗೂ ಮದರಸಾಗಳು ಅಭಿವೃದ್ಧಿ ಕುರಿತು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರು ಸ್ಥಳೀಯ ಅಲ್ಪಸಂಖ್ಯಾತ ಸಮುದಾಯದ ಮುಖಂಡರ ಜೊತೆ ಭಾನುವಾರ ಸಂಜೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ಮಸೀದಿ ಹಾಗೂ ಮದರಸಾಗಳ ಅಭಿವೃದ್ಧಿ ಎಂಬುದು ದೇವರ ಕೆಲಸ. ನಾನೂ ಈಗಾಗಲೇ ಜಾತಿ,ಮತ,ಪಂಥಗಳ ಬೇಧವಿಲ್ಲದೇ ದೇವಸ್ಥಾನ, ಚರ್ಚ್ ಹಾಗೂ ಮಸೀದಿ ಸೇರಿದಂತೆ ಎಲ್ಲಾ ದಾರ್ಮಿಕ ಸ್ಥಳಗಳ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇನೆ. ಸರ್ವ ಧರ್ಮಗಳು ಮನುಷ್ಯನ ಉದ್ಧಾರಕ್ಕೆ ಎಂದು ತಿಳಿದಿರುವ ನಾನು, ಮಸೀದಿಗಳ ಅಭಿವೃದ್ಧಿಯನ್ನು ಅಲ್ಲಾಹುವಿನ ಕೆಲಸ ಎಂದೆ ತಿಳಿದಿದ್ದೇನೆ ಎಂದರು. ಅಭಿವೃದ್ಧಿಯ ಅಗತ್ಯತೆ ಇರುವ ಕೆಲವು ಮಸೀದಿ ಹಾಗೂ ಮದರಸಾ ಮತ್ತು ಅಗತ್ಯವಿರುವ ಹಣಕಾಸಿನ ನೆರವಿನ ಕುರಿತು ಸ್ಥಳೀಯ ಅಲ್ಪಸಂಖ್ಯಾತ ಮುಖಂಡರುಗಳು ಸಚಿವರಿಗೆ ಈ ಸಂದರ್ಭದಲ್ಲಿ ತಿಳಿಸದರು. ಇದಕ್ಕೆ ಸ್ಪಂದಿಸಿದ ಸಚಿವರು ಇನ್ನೊಂದು ವಾರದಲ್ಲಿ ಮಸೀದಿ ಅಭಿವೃದ್ಧಿ ಕಾರ್ಯಗಳ ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮಸೀದಿ ಹಾಗೂ ಮದರಸಾಗಳ ಅಭಿವೃದ್ಧಿ ಕರ‍್ಯಕ್ಕೆ ಮುಂದಾಗಿರುವ ಸಮಾಜಕಲ್ಯಾಣ ಸಚಿವ ಶ್ರೀರಾಮುಲುರವರ ಕರ‍್ಯಕ್ಕೆ ಅಭಿನಂದನೆ ವ್ಯಕ್ತಪಡಿಸಿದ ಸಭೆಯಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ಭಾಂದವರು, ಸಾಮಾನ್ಯ ಜನರ ಕಷ್ಟಗಳಿಗೆ ಸ್ಪಂದಿಸುವ ನಾಯಕ. ಬಹುಸಂಖ್ಯಾತರು, ಅಲ್ಪಸಂಖ್ಯಾತರು ಎಂದು ಭೇದ ಮಾಡದೇ ಎಲ್ಲರನ್ನೂ ಒಂದೇ ರೀತಿ ಕಾಣುವ ಶ್ರೀರಾಮುಲುರವರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಮೂರ್ತಿಜಾ ಖಾನ್ ಸಬ್, ಎನ್. ನೂರ್ ಭಾಷಾ, ಮುಫ್ತಿ ಮಹಮ್ಮದ್ ಆಲಿ , ಮುಫ್ತಿ ಮಜೀದ್ , ನಜೀರ್ ಸಬ್ ಇತರರು ಇದ್ದರು.