ಹರಪನಹಳ್ಳಿ: ಪಟ್ಟಣದ ಬಾಣಿಗೇರಿಯ ಬೈಪಾಸ್ ನಲ್ಲಿ ಉದ್ಘಾಟನೆಗೊಳ್ಳಲಿರುವ ಕಾಂಗ್ರೆಸ್ ಪಕ್ಷದ ಕಛೇರಿಗೆ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನಯ್ಯ ಅವರು ಆಗಮಿಸಿ ಅಕ್ಷತೆ ಹಾಕಿ ಶುಭ ಕೋರಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸದೆ ಹಿಂದಿರುಗಿದರು.
ಈ ವೇಳೆ ಪುರಸಭೆ ಸದಸ್ಯರಾದ ಎಂ.ವಿ.ಅಂಜಿನಪ್ಪ ಮಾತನಾಡಿ ಈ ಕಛೇರಿ ಉದ್ಘಾಟನೆ ಗೊಂಡಿರುವುದು ಶುಭ ಸಂಕೇತವೇ ಸರಿ. ಇಷ್ಟು ದಿನ ಪಂಜರದ ಪಕ್ಷಿಯಂತೆ ಇದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸ್ವತಂತ್ರವಾಗಿದ್ದಾರೆ ಇನ್ನೂ ಮುಂದೆಯಾದರೂ ಪಕ್ಷದ ಮುಖಂಡರನ್ನು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂದ ಅವರು ಕಛೇರಿಯಲ್ಲಿ ಹಾಕಿದ್ದ ಬ್ಯಾನರ್ ನಲ್ಲಿ ದಿವಂಗತ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಹಾಗೂ ಕ್ಷೇತ್ರದ ಮಾಜಿ ಶಾಸಕ ದಿವಂಗತ ಎಂ.ಪಿ.ರವೀಂದ್ರ ಅವರ ಫೋಟೋ ಹಾಕದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಯಾರೋಬ್ಬರ ಪಕ್ಷ ಅಲ್ಲ ಅದು ಕಾರ್ಯಕರ್ತರ ಪಕ್ಷ. ಹರಪನಹಳ್ಳಿ ಕಾಂಗ್ರೆಸ್ ನಲ್ಲಿ ಪಕ್ಷ ಪೂಜೆಗಿಂತ ವ್ಯಕ್ತಿ ಪೂಜೆ ನಡೆಯುತ್ತಿದೆ ಇದನ್ನು ನಾವು ವಿರೋಧಿಸುತ್ತೇವೆ. ಹರಪನಹಳ್ಳಿ ಕಾಂಗ್ರೆಸ್ ನಲ್ಲಿ ಇರುವ ಗುಂಪುಗಾರಿ ಕುರಿತು ಈಗಾಗಲೇ ನಮ್ಮ ಪಕ್ಷದ ವರೀಷ್ಠರಾದ ಡಿ.ಕೆ.ಶಿವಕುಮಾರ್, ಸಿದ್ದಾರಾಮಯ್ಯ, ಸಲೀಂ ಅಹ್ಮದ್, ಯು.ಟಿ.ಖಾದರ್ ಅವರಿಗೆ ಮನವರಿಕೆ ಮಾಡಿ ಕೊಟ್ಟಿದ್ದೇವೆ ನಮಗೆ ಸಮಯವನ್ನು ಸಹ ನಿಗಧಿ ಮಾಡಿದ್ದಾರೆ ಶೀಘ್ರದಲ್ಲೇ ನಿಯೋಗ ಹೋಗುತ್ತೇವೆ ಎಂದರು. ಪುರಸಭೆ ಸದ್ಯರಾದ ಟಿ.ವೆಂಕಟೇಶ್, ಗೊಂಗಡಿ ನಾಗರಾಜ್, ಉದ್ದಾರ ಗಣೇಶ್, ಲಾಟಿ ದಾದಾಪೀರ್, ತಾ.ಪಂ ಸದಸ್ಯ ಹುಲಿಕಟ್ಟಿ ಚಂದ್ರಪ್ಪ, ಮುಖಂಡರಾದ ಚಿಕ್ಕೇರಿ ಬಸಪ್ಪ, ತಾ ಹೆಚ್.ವಸಂತಪ್ಪ, ರಾಯದುರ್ಗದ ವಾಗೀಶ್, ನಿಚ್ಚವ್ವನಹಳ್ಳಿ ಗ್ರಾ.ಪಂ ಅಧ್ಯಕ್ಷ ಮಂಜುನಾಥ್, ತೆಲಿಗಿ ಉಮಾಕಾಂತ್, ಕಂಚಿಕೇರಿ ಜಯಲಕ್ಷ್ಮೀ, ಕವಿತಾ ವಾಗೀಶ್, ನಂದಿಬೇವೂರು ಅಶೋಕ ಗೌಡ, ಉದಯ್ ಶಂಕರ್, ಅಡಿವಿಹಳ್ಳಿ ಪೂಜಾರ್ ರಾಜು ಮತ್ತಿತರರು ಉಪಸ್ಥಿತರಿದ್ದರು.