ಗುವಾಹಟಿ: ಮಣಿಪುರದ ನೋನಿ ಜಿಲ್ಲೆಯ ತುಪುಲ್ ಯಾರ್ಡ್ ರೈಲ್ವೆ ನಿರ್ಮಾಣ ಸ್ಥಳದಲ್ಲಿ ಭಾರೀ ಭೂಕುಸಿತದಿಂದ ಸಾವನ್ನಪ್ಪಿರುವವರ ಸಂಖ್ಯೆ ೧೬ಕ್ಕೇರಿಕೆಯಾಗಿದೆ. ಮೃತರಲ್ಲಿ ಯೋಧರೂ ಸೇರಿದ್ದಾರೆ.
ತುಪುಲ್ ಯಾರ್ಡ್ ರೈಲ್ವೆ ನಿರ್ಮಾಣ ಸ್ಥಳದ ಸಮೀಪವಿರುವ ೧೦೭ ಟೆರಿಟೋರಿಯಲ್ ಆರ್ಮಿ (ಟಿಎ) ಶಿಬಿರದಲ್ಲಿ ಬುಧವಾರ ರಾತ್ರಿ ಭಾರೀ ಭೂಕುಸಿತ ಸಂಭವಿಸಿತ್ತು. ಭೂಕುಸಿತದ ಮಣ್ಣು ನದಿಗೆ ಅಡ್ಡಲಾಗಿ ಬಿದ್ದಿದ್ದು ಅಣೆಕಟ್ಟು ನಿರ್ಮಾಣದ ಸ್ಥಿತಿ ಉಂಟಾಗಿದೆ. ಹಲವಾರು ಯೋಧರು ಸೇರಿದಂತೆ ಕನಿಷ್ಠ ೫೫ ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ . ನದಿಯಿಂದ ಮೃತದೇಹಗಳನ್ನು ಹೊರತೆಗೆಯಲಾಗುತ್ತಿದೆ.
ಸ್ಥಳದಲ್ಲಿ ಕೇಂದ್ರ ಮತ್ತು ರಾಜ್ಯ ವಿಪತ್ತು ಪಡೆಗಳ ಜೊತೆಗೆ ಭಾರತೀಯ ಸೇನೆ, ಅಸ್ಸಾಂ ರೈಫಲ್ಸ್ ಮತ್ತು ಪ್ರಾದೇಶಿಕ ಸೇನೆಯಿಂದ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಜಿರಿಬಾಮ್ ಜಿಲ್ಲೆಯಿಂದ ರಾಜ್ಯದ ರಾಜಧಾನಿ ಇಂಫಾಲ್‌ಗೆ ನಿರ್ಮಿಸಲಾಗುತ್ತಿರುವ ರೈಲು ಮಾರ್ಗಕ್ಕೆ ಪ್ರಾದೇಶಿಕ ಸೇನೆಯು ಭದ್ರತೆಯನ್ನು ಒದಗಿಸುತ್ತದೆ. ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಮೃತರ ಕುಟುಂಬಕ್ಕೆ ತಲಾ ೫ ಲಕ್ಷ ರೂ. ಮತ್ತು ಗಾಯಗೊಂಡವರಿಗೆ ೫೦,೦೦೦ ರೂ. ಆರ್ಥಿಕ ನೆರವು ಘೋಷಿಸಿದ್ದಾರೆ.