ಬೆಳಗಾಯಿತು ವಾರ್ತೆ
ಕೊಟ್ಟೂರು: ಶೇಂಗಾ ಬೆಳೆ ಖರೀದಿಗೆ ಮುಂದಾಗದ ಖರೀದಿದಾರರ ವಿರುದ್ಧ ರೈತರು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ಪಟ್ಟಣದ ಎಪಿಎಂಸಿಯಲ್ಲಿ ನಡೆದಿದೆ.
ಶೇಂಗಾ ಬೆಳೆಗೆ ಧರ ಕಡಿಮೆಯಾಯಿತು ಎಂದು ರೈತರು ಕಳೆದ ವಾರ ಪ್ರತಿಭಟನೆ ನಡೆಸಿದ ಬೆನ್ನಲ್ಲಿ ಈ ವಾರ ಖರೀದಿದಾರರೆಲ್ಲರೂ ಒಂದಾಗಿ ಇಂದು ಶೇಂಗಾ ಖರೀದಿಗೆ ಮುಂದಾಗದಿರುವುದರಿಂದ ರೈತರು ಸಹ ಖರೀದಿದಾರರ ವಿರುದ್ಧ ಮಾರುಕಟ್ಟೆಯ ಕಚೇರಿಯ ಮುಂದೆ ಪ್ರತಿಭಟನೆಗಿಳಿದರು.
ಪ್ರತಿಭಟನೆ ವಿಷಯ ತಿಳಿದು ಸಿಪಿಐ ವೆಂಕಟಸ್ವಾಮಿ ಹಾಗೂ ಪಿಎಸ್ಐ ವೆಂಕಟೇಶ್ ಆಗಮಿಸಿ ರೈತರ ಸಮ್ಮುಖದಲ್ಲಿ ಖರೀದಿದಾರರನ್ನು ವಿಚಾರಿಸಿದಾಗ ಇತ್ತೀಚೆಗೆ ಶೆಂಗಾವನ್ನು ಬಳ್ಳಿಯಿಂದ ಬೇರ್ಪಡಿಸಲು ಯಂತ್ರಕ್ಕೆ ಹಾಕುವುದರಿಂದ ಕಲ್ಲು, ಮಣ್ಣಿನಿಂದ ಕೂಡಿರುತ್ತದೆ ಇಂತಹ ಮಾಲನ್ನು ಖರೀದಿಸಿದಾಗ ನಮಗೆ ನಷ್ಟವಾಗುತ್ತದೆ ಎಂದು ಖರೀದಿದಾರರು ತಮ್ಮ ಸಮಸ್ಯೆ ಹೇಳಿಕೊಂಡರು.
ರೈತರು ತಂದ ಮಾಲಿನಲ್ಲಿ ಒಂದು ಚೀಲವನ್ನು ಸುರುವಿ ಅದರಲ್ಲಿರುವ ಕಲ್ಲು, ಮಣ್ಣು ತೂಕ ಮಾಡಿ ಅಷ್ಟು ಪ್ರಮಾಣವನ್ನು ಒಟ್ಟು ಮಾಲಿನಲ್ಲಿ ವಜಾ ಮಾಡುವುದಕ್ಕೆ ರೈತರು ಒಪ್ಪಿಗೆ ಸೂಚಿಸಿದರೆ ಮಾತ್ರ ಖರೀದಿಗೆ ಮುಂದಾಗುವುದಾಗಿ ಖರೀದಿದಾರರು ಬಿಗಿಪಟ್ಟು ಹಿಡಿದರು.
ಹಮಾಲರು ಬಾಜು ಎಂದು ಹೇಳಿ 2 ಕೆಜಿ ತಗೆಯುತ್ತಾರೆ. ಚೀಲದ ತೂಕ ಮತ್ತು ವೇಸ್ಟೇಜ್ ಎಂದು ತೂಕದಲ್ಲಿಯು ಸಹ ತಗೆಯುತ್ತಾರೆ. ದುಬಾರಿ ಕೂಲಿಗಳ ಸಮಸ್ಯೆಯಿಂದ ಮೆಷೀನ್ ಗೆ ಹಾಕಿ ಶೆಂಗಾವನ್ನು ಬೇರ್ಪಡಿಸುವುದು ಅನಿವಾರ್ಯತೆ ಇದೆ ಎಂದು ರೈತರು ತಮ್ಮ ನೋವನ್ನು ಹೇಳಿಕೊಂಡರು.
ಮಾಲಿಗೆ ತಕ್ಕಂತೆ ಧರ ನಿಗದಿಪಡಿಸಿ ಎಂದರೂ ಖರೀದಿಸದ ಖರೀದಿದಾರರ ವಿರುದ್ಧ ಅಸಮಧಾನ ವ್ಯಕ್ತಪಡಿಸಿ ಎಲ್ಲಾ ರೀತಿಯಿಂದಲೂ ನಮಗೆ ಅನ್ಯಾಯವಾಗುತ್ತದೆ ಎಂದು ರೈತರು ನೋವನ್ನು ವ್ಯಕ್ತಪಡಿಸಿದರು.
ಸಿಪಿಐ ವೆಂಕಟಸ್ವಾಮಿ ಮಾತನಾಡಿ ರೈತರು ಉತ್ಪನ್ನಗಳನ್ನು ಸ್ವಚ್ಛ ಮಾಡಿ ತಂದರೆ ಮಾಲಿಗೆ ತಕ್ಕಂತೆ ಬೆಲೆ ದೊರೆಯುತ್ತದೆ ಎಂದು ಸಮಾಧಾನಪಡಿಸಿ ಖರೀದಿದಾರರು ಹಾಗೂ ದಲ್ಲಾಳಿ ವರ್ತಕರಿಂದ ರೈತರಿಗೆ ಯಾವುದೇ ರೀತಿ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಿ ಎಂದು ಮಾರುಕಟ್ಟೆ ಕಾರ್ಯದರ್ಶಿ ಎ.ಕೆ.ವೀರಣ್ಣ ಇವರಿಗೆ ಸೂಚಿಸಿದರು.
ವರದಿ: ಕೊಟ್ರೇಶ್ ತೆಗ್ಗಿನಕೇರಿ…