ಬೆಂಗಳೂರು: ರಾಜ್ಯ ಕಾರ್ಮಿಕ ಇಲಾಖೆ ಶ್ರಮಿಕ ವರ್ಗದ ಬಾಕಿ ಅರ್ಜಿಗಳನ್ನು ಕಾಲಾವಧಿಯಲ್ಲಿ ಇತ್ಯರ್ಥಪಡಿಸಿ ಸವಲತ್ತುಗಳ ವಿತರಣೆಗಾಗಿ ಕಾರ್ಮಿಕ ಅದಾಲತ್ ೨.೦ ಅನ್ನು ಆಯೋಜಿಸಲಾಗಿದೆ. ಇದಕ್ಕಾಗಿ ರಾಜ್ಯದಾದ್ಯಂತ ಕಾರ್ಮಿಕರಿಂದ ಅರ್ಜಿ ಪಡೆಯುವ ಪ್ರಕ್ರಿಯೆ ಆರಂಭಗೊಳಿಸಲಾಗಿದೆ.
ರಾಜ್ಯದ ಕಾರ್ಮಿಕ ವಲಯಕ್ಕೆ ಬೆನ್ನೆಲುಬಾಗಿ ನಿಂತು ಕಾರ್ಯನಿರ್ವಹಿಸುತ್ತಿರುವ ಇಲಾಖೆಯು ಬಹು ವರ್ಷಗಳಿಂದ ಬಾಕಿ ಉಳಿದಿದ್ದ ಅರ್ಜಿಗಳ ಇತ್ಯರ್ಥದ ಜತೆಗೆ ಕೂಡಲೇ ಸವಲತ್ತುಗಳನ್ನು ಒದಗಿಸಿ ಯಶಸ್ಸು ಕಂಡ ಕಾರ್ಮಿಕ ಅದಾಲತ್ ೧.೦ ನಂತೆಯೇ ಇದೀಗ ಕಾರ್ಮಿಕ ಅದಾಲತ್ ೨.೦ಗೆ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಚಾಲನೆ ನೀಡಿದ್ದು, ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗಿದೆ.
ದೇಶವು ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಪುನರ್ ಆಯೋಜಿಸಲಾಗಿದ್ದು, ಶ್ರಮಿಕ ವರ್ಗಕ್ಕೆ ಇಲಾಖೆಯಿಂದ ನೀಡಲಾಗುವ ಸೌಲಭ್ಯಗಳು, ಅಗತ್ಯ ನೆರವು ಮತ್ತು ಯೋಜನೆಗಳನ್ನು ತ್ವರಿತಗತಿಯಲ್ಲಿ ತಲುಪಿಸುವ ಸಲುವಾಗಿ “ಕಾರ್ಮಿಕ ಅದಾಲತ್ ೨.೦” ಅನ್ನು ಆಯೋಜಿಸಲಾಗಿದೆ. ಇದೇ ೧೫ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಜುಲೈ ೩೧ರವರೆಗೆ ಅರ್ಜಿಗಳ ಸಲ್ಲಿಕೆಗೆ ಅವಕಾಶವಿದ್ದು, ಸಲ್ಲಿಕೆಯಾದ ಅರ್ಜಿಗಳು ಮತ್ತು ಬಾಕಿ ಅರ್ಜಿಗಳನ್ನು ರಾಜ್ಯದಾದ್ಯಂತ ಆಗಸ್ಟ್ ೧ರಿಂದ ಮೊದಲ್ಗೊಂಡು ೧೫ನೇ ತಾರೀಖಿನವರೆಗೆ ವಿಲೇವಾರಿ ಮಾಡಲು ಸಚಿವ ಹೆಬ್ಬಾರ್ ಸೂಚಿಸಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳನ್ನು ಪಡೆದು ವಿಲೇವಾರಿ ಮಾಡಲು ಅನುವಾಗುವಂತೆ ಇಲಾಖೆಯು “ಕಾರ್ಮಿಕ ಅದಾಲತ್ ೨.೦” ಬಗ್ಗೆ ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಭರ್ಜರಿ ಪ್ರಚಾರವನ್ನೂ ಸಹ ಕೈಗೊಂಡಿದ್ದು, ಶ್ರಮಿಕವ ವರ್ಗಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮುಂದಡಿ ಇರಿಸಿದೆ.