ಟೋಕಿಯೊ- ಭರ್ಜರಿ ಪ್ರದರ್ಶನ ನೀಡಿದ ಭಾರತ ತಂಡ ಒಲಿಂಪಿಕ್ಸ್ ಪುರುಷರ ಹಾಕಿ ಎ ಗುಂಪಿನ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಮಣಿಸಿ, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಭಾರತದ ಪರ ಸಿಮ್ರನ್ ಪ್ರೀತ್ ಸಿಂಗ್, ರೂಪೇಂದ್ರ ಪಾಲ್ ಸಿಂಗ್ (15, 51ನೇ ನಿಮಿಷ) ಬಾರಿಸಿದ ಗೋಲಿನ ಸಹಾಯದಿಂದ ಮನ್ ಪ್ರೀತ್ ಪಡೆ ಸ್ಪೇನ್ ತಂಡವನ್ನು ಮಣಿಸಿತು. ಈ ಮೂಲಕ ಭಾರತ ಪೂರ್ಣ ಅಂಕವನ್ನು ಕಲೆ ಹಾಕಿದೆ. ಮೊದಲ ಪಂದ್ಯದಲ್ಲಿ ಗೆಲುವು, ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಕಂಡಿದ್ದ ಭಾರತ ಜಯದ ಲಯಕ್ಕೆ ಮರಳಿದೆ.
ಆರಂಭದಿಂದಲೂ ಭರ್ಜರಿ ಪ್ರದರರ್ಶನ ನೀಡಿದ ಭಾರತ ಅಬ್ಬರಿಸಿತು. ಮೊದಲಾವಧಿಯ ಕೊನೆಯ ಕ್ಷಣದಲ್ಲಿ ಭಾರತ ಸತತ ಎರಡು ಗೋಲುಗಳನ್ನು ದಾಖಲಿಸಿ ಆರ್ಭಟಿಸಿತು. ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿದ ಭಾರತ ಮೊದಲಾವಧಿಯಲ್ಲಿ ಯಶ ಕಂಡಿತು. ಈ ಅವಧಿಯಲ್ಲಿ ಎದುರಾಳಿ ಆಟಗಾರರ ತಂತ್ರವನ್ನು ಅರಿತು ಆಡಿದ ಭಾರತೀಯ ಆಟಗಾರರು ಗೋಲುಗಳನ್ನು ಕಲೆ ಹಾಕಿದರು. ಈ ಅವಧಿಯಲ್ಲಿ ಸಿಕ್ಕ ಉತ್ತಮ ಅವಕಾಶವನ್ನು ರೂಪೇಂದ್ರ ಪಾಲ್ ಸಿಂಗ್ ಬಳಸಿಕೊಂಡರು. ಇದಾದ ಒಂದೇ ನಿಮಿಷದಲ್ಲಿ ಸಿಮ್ರನ್ ಚೆಂಡನ್ನು ಗೋಲು ಪೆಟ್ಟಿಗೆಯಲ್ಲಿ ನೂಕುವಲ್ಲಿ ಸಫಲರಾದರು. ಪರಿಣಾಮ ಭಾರತಕ್ಕೆ ಆರಂಭದಲ್ಲಿ ೨-೦ ಮುನ್ನಡೆ ಲಭಿಸಿತು.