ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಬಂಧನಕ್ಕೊಳಗಾಗಿರುವ ಎಡಿಜಿಪಿ ಅಮೃತ್ ಪೌಲ್ ಅವರು ಈ ಹಗರಣದಲ್ಲಿ ಭಾಗಿಯಾಗಿರುವ ಸಚಿವರು, ನಾಯಕರ ಹೆಸರನ್ನು ಬಹಿರಂಗಪಡಿಸಲು ಸಿದ್ಧವಿದ್ದರೂ ತನಿಖಾಧಿಕಾರಿಗಳು ಅದನ್ನು ದಾಖಲಿಸಿಕೊಳ್ಳುತ್ತಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಕರ್ನಾಟಕ ಭ್ರಷ್ಟಾಚಾರದ ರಾಜಧಾನಿಯಾಗಿದೆ. ಈ ಕುರಿತು ಹೈಕೋರ್ಟ್ ನ್ಯಾಯಾಧೀಶರು ಏನು ಹೇಳಿದ್ದಾರೆ ಎಂದು ಎಲ್ಲರೂ ನೋಡಿದ್ದಾರೆ. ಪಿಎಸ್ಐ ಹಗರಣದಲ್ಲಿ ರಾಜ್ಯದ ಐಪಿಎಸ್ ಅಧಿಕಾರಿಗಳು, ರಾಜಕಾರಣಿಗಳು, ಮಂತ್ರಿಗಳು ಭಾಗಿಯಾಗಿದ್ದಾರೆ. ರಾಜ್ಯದಲ್ಲಿ ಯಾವುದೇ ಯೋಜನೆಗಳು ಜಾರಿಯಾಗುತ್ತಿಲ್ಲ. ಬಿಜೆಪಿ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಅವರ ಕತೆ ಮುಕ್ತಾಯದ ಹಂತದಲ್ಲಿದ್ದು, ಜನ ಅವರನ್ನು ಅಧಿಕಾರದಿಂದ ಕಿತ್ತೊಗೆಯಲಿದ್ದಾರೆ ಎಂದು ಹೇಳಿದ್ದಾರೆ.