ದಿಸ್ಪುರ್: ಅಸ್ಸಾಂನಲ್ಲಿ ವರುಣನ ಆರ್ಭಟದಿಂದ ಸಂಭವಿಸಿರುವ ಪ್ರವಾಹ ಮತ್ತು ಭೂಕುಸಿತದಿಂದ ಜನರು ಕಂಗೆಟ್ಟಿದ್ದು, ಮಂಗಳವಾರ ಸಾವಿನ ಸಂಖ್ಯೆ 80 ದಾಟಿದೆ. 34 ಜಿಲ್ಲೆಗಳಲ್ಲಿ ವರುಣ ತನ್ನ ಆರ್ಭಟ ತೋರಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 2,31,819 ಜನರು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದರೆ, ಇಬ್ಬರು ಪೊಲೀಸರು ಸೇರಿದಂತೆ ಇನ್ನೂ 10 ಜನರನ್ನು ಪ್ರವಾಹವು ಬಲಿ ತೆಗೆದುಕೊಂಡಿದೆ.
ಬ್ರಹ್ಮಪುತ್ರ, ಕೊಪಿಲಿ, ಬೇಕಿ, ಪಗ್ಲಾಡಿಯಾ, ಪುತಿಮರಿ ಎಂಬ ಐದು ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‍ಡಿಆರ್‍ಎಫ್) ನಾಲ್ಕು ಘಟಕಗಳು, ಒಟ್ಟು 105 ಸಿಬ್ಬಂದಿ, ಆಧುನಿಕ ಜೀವ ರಕ್ಷಕ ಸಾಧನಗಳನ್ನು ಬರಾಕ್ ಕಣಿವೆಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಮಂಗಳವಾರ ಕಳುಹಿಸಲಾಗಿದೆ.