ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ನಾಲ್ಕನೇ ಬಾರಿಗೆ ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ಹಾಜರಾಗಿದ್ದಾರೆ. ರಾಹುಲ್ ಗಾಂಧಿಯವರ ಮೊದಲ ಮೂರು ಸುತ್ತಿನ ವಿಚಾರಣೆ ವೇಳೆ ಕಾಂಗ್ರೆಸ್ ಇಡಿ ವಿಚಾರಣೆ ವಿರೋಧಿಸಿ ಪ್ರದರ್ಶನ ತೋರಿಸಿತು. ಪಕ್ಷದ ನಾಯಕರು ರಾಷ್ಟ್ರ ರಾಜಧಾನಿಯಲ್ಲಿ ಬೀದಿಗಿಳಿದು ಹೋರಾಟ ನಡೆಸಿದ್ದರು. ವಿರೋಧ ಪಕ್ಷವು ಈಗ ತನ್ನ ಪ್ರತಿಭಟನಾ ತಂತ್ರವನ್ನು ಬದಲಾಯಿಸಲು ನಿರ್ಧರಿಸಿದೆ.
ದೇಶಾದ್ಯಂತ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಯುವ ವಿರೋಧಿ ಅಗ್ನಿಪಥ ಯೋಜನೆ ವಿರುದ್ಧ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನ ಇಡಿ ವಿಚಾರಣೆ ನಡೆಸುತ್ತಿರುವುದನ್ನ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಶಾಂತಿಯುತ ಪ್ರತಿಭಟನೆಗಳನ್ನು ಮುಂದುವರೆಸಲಿದ್ದಾರೆ. ಕಾಂಗ್ರೆಸ್ ನಿಯೋಗವು ಸಂಜೆ ರಾಷ್ಟ್ರಪತಿಗಳನ್ನು ಭೇಟಿ ಮಾಡಲಿದೆ. ರಾಷ್ಟ್ರಪತಿ ಭೇಟಿ ವೇಳೆ ಪಕ್ಷದ ಪ್ರಧಾನ ಕಚೇರಿಗೆ ಪೊಲೀಸ್ ಸಿಬ್ಬಂದಿಯ ಪ್ರವೇಶ ಕುರಿತು ಕಾಂಗ್ರೆಸ್ ನಾಯಕರು ಪತ್ರವನ್ನು ಸಲ್ಲಿಸಲಿದ್ದಾರೆ. ಅಗ್ನಿಪಥ್ ಯೋಜನೆಯನ್ನು ಹಿಂಪಡೆಯುವಂತೆ ಒತ್ತಾಯಿಸುತ್ತೇವೆ ಎಂದು ಪಕ್ಷದ ನಾಯಕ ಅಜಯ್ ಮಾಕನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.