ಸಿಂಧ್: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಗ್ರಾಮೀಣ ಆರೋಗ್ಯ ಕೇಂದ್ರವು ವೈದ್ಯಕೀಯ ನಿರ್ಲಕ್ಷ್ಯದ ಘಟನೆಗೆ ಸಾಕ್ಷಿಯಾಗಿದ್ದು, ಇಲ್ಲಿನ ಸಿಬ್ಬಂದಿಯೊಬ್ಬರು ನವಜಾತ ಶಿಶುವಿನ ತಲೆಯನ್ನು ಕತ್ತರಿಸಿ ತಾಯಿಯ ಗರ್ಭದೊಳಗೆ ಬಿಟ್ಟಿರುವ ಆತಂಕದ ಘಟನೆ ನಡೆದಿದೆ. ತಾರ್ಪಾರ್ಕರ್ ಜಿಲ್ಲೆಯ ಗ್ರಾಮದ ಭೀಲ್ ಹಿಂದೂ ಮಹಿಳೆ, ಮೊದಲು ತನ್ನ ಪ್ರದೇಶದಲ್ಲಿನ ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ (ಖಊಅ) ಹೋಗಿದ್ದರು. ಆದರೆ ಮಹಿಳಾ ಸ್ತ್ರೀರೋಗತಜ್ಞರು ಲಭ್ಯವಿರಲಿಲ್ಲ. ಆದ ಕಾರಣ ಯಾವುದೇ ಅನುಭವವಿಲ್ಲದ ಆರ್‍ಎಚ್‍ಸಿ ಸಿಬ್ಬಂದಿ ಶಸ್ತ್ರಚಿಕಿತ್ಸೆ ನಡೆಸಿ ತಾಯಿಯ ಗರ್ಭದಲ್ಲಿರುವ ನವಜಾತ ಶಿಶುವಿನ ತಲೆಯನ್ನು ಕತ್ತರಿಸಿ ಅವರೊಳಗೆ ಬಿಟ್ಟಿದ್ದಾರೆ.
ಮಹಿಳೆಗೆ ಪ್ರಾಣಾಪಾಯ ಎದುರಾದಾಗ, ಆಕೆಗೆ ಚಿಕಿತ್ಸೆ ನೀಡಲು ಯಾವುದೇ ಸೌಲಭ್ಯಗಳಿಲ್ಲದ ಮಿಥಿಯ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಅಂತಿಮವಾಗಿ, ಆಕೆಯ ಕುಟುಂಬವು ಅವಳನ್ನು ಯೂನಿವರ್ಸಿಟಿ ಆಫ್ ಮೆಡಿಕಲ್ ಅಂಡ್ ಹೆಲ್ತ್ ಸೈನ್ಸಸ್ ಗೆ ಕರೆತಂದಿತು, ಆಗ ಘಟನೆ ಬೆಳಕಿಗೆ ಬಂದಿದೆ.
“ಮಹಿಳೆಯ ಗರ್ಭಕೋಶದಲ್ಲಿ ಮಗುವಿನ ತಲೆ ಸಿಕ್ಕಿಹಾಕಿಕೊಂಡಿತ್ತು. ತಾಯಿಯ ಗರ್ಭಾಶಯವು ಛಿದ್ರವಾಗಿತ್ತು ಮತ್ತು ಆಕೆಯ ಜೀವವನ್ನು ಉಳಿಸಲು ಶಸ್ತ್ರಚಿಕಿತ್ಸೆ ನಡೆಸಿ ತಲೆಯನ್ನು ಹೊರತೆಗೆದು, ತಾಯಿ ಜೀವವನ್ನು ಉಳಿಸಲಾಯಿತು ಎಂದು ಲಿಯಾಕತ್ ಯೂನಿವರ್ಸಿಟಿ ಆಫ್ ಮೆಡಿಕಲ್ ಅಂಡ್ ಹೆಲ್ತ್ ಸೈನ್ಸಸ್‍ನ ಸ್ತ್ರೀರೋಗ ಶಾಸ್ತ್ರ ಘಟಕದ ಮುಖ್ಯಸ್ಥ ರಾಹೀಲ್ ಸಿಕಂದರ್ ತಿಳಿಸಿದ್ದಾರೆ.