ಬೆಳಗಾಯಿತು ವಾರ್ತೆ
ಬಳ್ಳಾರಿ: ನೂತನ ಸಚಿವ ಸಂಪುಟದಲ್ಲಿ ಕುರುಬ ಸಮುದಾಯದ ಸಚಿವರಾದ ಕೆ.ಎಸ್ ಈಶ್ವರಪ್ಪ ನವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಹಾಗೂ ಕುರುಬ ಸಮಾಜಕ್ಕೆ ಉತ್ತಮ ಪ್ರಾಶಸ್ತ್ಯ ನೀಡಬೇಕು ಎಂದು ಬಳ್ಳಾರಿ ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಕೆ. ಎರ್ರಿಗೌಡ ಅವರು ಒತ್ತಾಯಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಿಎಂ ಬದಲಾವಣೆಯಿಂದಾಗಿ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಇಳಿಸಿ ನೂತನವಾಗಿ ಬಸವರಾಜ ಬೊಮ್ಮಾಯಿ ಅವರು ನೂತನ ಮುಖ್ಯಮಂತ್ರಿಗಳಾಗಿ ಬುಧವಾರವಷ್ಟೇ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ ಸಿಎಂ ಬೊಮ್ಮಾಯಿ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಕುರುಬ ಸಮುದಾಯಕ್ಕೂ ಪ್ರಾಶಸ್ಯ ನೀಡಬೇಕು. ರಾಜ್ಯದಲ್ಲಿ ಕುರುಬ ಸಮುದಾಯದವೂ ದೊಡ್ಡ ಸಮುದಾಯವಾಗಿದೆ. ಕುರುಬ ಸಮುದಾಯದ ಕೆ.ಎಸ್.ಈಶ್ವರಪ್ಪ ಅವರು ಸಹ ಮಾಜಿ ಸಿಎಂ ಯಡಿಯೂರಪ್ಪ ಅವರೊಂದಿಗೆ ಬಿಜೆಪಿ ಪಕ್ಷವನ್ನು ಬಲಪಡಿಸುವಲ್ಲಿ ಶ್ರಮಿಸಿದ್ದಾರೆ. ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ ಈಶ್ವರಪ್ಪನವರು ಪಕ್ಷವನ್ನು ಎಂದೂ ಬಿಟ್ಟಿಲ್ಲ.
ಕಲವರು ಪಕ್ಷದಿಂದ ಹೊರಬಂದು ಹೊಸ ಪಕ್ಷ ಕಟ್ಟಿ ವಾಪಸ್ ಬಂದರು. ಇನ್ನು ಕೆಲವರು ಬೇರೆ ಪಕ್ಷ ಸೇರಿ ವಾಪಸ್ ಬಿಜೆಪಿಗೆ ಬಂದರೂ, ಈಶ್ವರಪ್ಪನವರು ಮಾತ್ರ ಮಾತೃಪಕ್ಷಕ್ಕೆ ಎಂದೂ ದ್ರೋಹ ಬಗೆದಿಲ್ಲ. ಪಕ್ಷವನ್ನು ನಂಬಿಕೊಂಡಿರುವುದರಿಂದ ಬೇರೆ ಪಕ್ಷದ ಕದ ತಟ್ಟದೆ ಸುಮಾರು ವರ್ಷಗಳಿಂದ ಬಿಜೆಪಿ ಪಕ್ಷದಲ್ಲೇ ಉಳಿಯುವ ಮೂಲಕ ಪಕ್ಷ ನಿಷ್ಠೆಯನ್ನು ಮೆರೆದಿದ್ದಾರೆ. ಹಾಗಾಗಿ ಈಶ್ವರಪ್ಪನವರನ್ನು ಉಪ ಮುಖ್ಯಮಂತ್ರಿಗಳನ್ನಾಗಿ ಹಾಗೂ ನೂತನ ಸಚಿವ ಸಂಪುಟದಲ್ಲಿ ಕುರುಬ ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ಯ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ಎ.ಮಲ್ಲೇಶಪ್ಪ, ಖಜಾಂಚಿ ಮೋಹನ್ ಕೆ, ಸಹ ಕಾರ್ಯದರ್ಶಿ ಹೊನ್ನೂರಸ್ವಾಮಿ ಸೇರಿದಂತೆ ಇತರರು ಇದ್ದರು.