ಬೆಂಗಳೂರು: ನಗರದಲ್ಲಿ ಡೆಲ್ಟಾ ಪ್ಲಸ್ ಸೋಂಕು ಪತ್ತೆಯಾಗಿರುವುದರಿಂದ ಜನ ಆತಂಕಕ್ಕೊಳಗಾಗುವುದು ಬೇಡ. ಎಂದಿನಂತೆ ಮಾಸ್ಕ್ ಧರಿಸಿ , ಸಾಮಾಜಿಕ ಅಂತರ ಕಾಯ್ದುಕೊಂಡರೆ ಎಂತಹದೇ ಸೋಂಕಿನಿಂದಲೂ ಬಚಾವಾಗಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ಒಂದೇ ತಳಿಯ ವೈರಸ್ ಹೀಗಾಗಿ ಜನ ಆತಂಕ ಪಡದೆ ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡಿಕೊಂಡರು. ಅಕ್ಕ ಪಕ್ಕದ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಮ್ಮ ರಾಜ್ಯದಲ್ಲೂ ಎಚ್ಚರಿಕೆ ವಹಿಸುವುದು ಸೂಕ್ತ. ಮೂರನೆ ಅನ್‍ಲಾಕ್ ಸಂದರ್ಭದಲ್ಲಿ ಮತ್ತಷ್ಟು ಸಡಿಲಿಕೆ ನೀಡಲಾಗುವುದು.
ಹಂತ ಹಂತವಾಗಿ ಲಾಕ್‍ಡೌನ್ ಸಡಿಲಗೊಳಿಸಲಾಗುವುದು ಎಂದು ಅವರು ತಿಳಿಸಿದರು. ನಗರದಲ್ಲಿ ಪ್ರತಿ ನಿತ್ಯ ಕೊರೊನಾ ಸೋಂಕು ಪತ್ತೆ ಮತ್ತು ನಿಗಾ ವಹಿಸಲಾಗುತ್ತಿದೆ. ಪ್ರತಿ ವಲಯದಲ್ಲಿಯೂ ಮನೆ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಸದ್ಯ ದಕ್ಷಿಣ ವಲಯದಲ್ಲಿ ಹೆಚ್ಚು ಸೋಂಕು ಕಂಡು ಬಂದಿರುವುದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.