ಬೆಳಗಾಯಿತು ವಾರ್ತೆ
ಬಳ್ಳಾರಿ: ಕೋವಿಡ್ 3ನೇ ಅಲೆಯನ್ನು ಸಮರ್ಪಕವಾಗಿ ಎದುರಿಸುವ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲಾಡಳಿತ ಅಗತ್ಯ ಬೆಡ್‌ಗಳ ವ್ಯವಸ್ಥೆ,ಔಷಧೀಯ ವ್ಯವಸ್ಥೆ,ಮನೆ-ಮನೆ ಸಮೀಕ್ಷೆ, ಆರಂಭಿಕ ಹಂತದಲ್ಲಿಯೇ ಸೊಂಕು ಪತ್ತೆಹಚ್ಚಿ ಚಿಕಿತ್ಸೆ ನೀಡುವಿಕೆ, ಎಸ್‌ಎಂಎಸ್ ಕಟ್ಟುನಿಟ್ಟಿನ ಪಾಲನೆ, ನಿರ್ಬಂಧಗಳ ಪರಿಣಾಮಕಾರಿ ಜಾರಿ ಮಾಡುವುದು ಸೇರಿದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಮಹಾರಾಷ್ಟಮತ್ತು ಕೇರಳ ರಾಜ್ಯಗಳಲ್ಲಿ ಈಗಾಗಲೇ ಕೋವಿಡ್ ಸೊಂಕು ವ್ಯಾಪಿಸುತ್ತಿದೆ.ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಗಡಿಗೆ ಹೊಂದಿಕೊoಡಿರುವ ಜಿಲ್ಲೆಗಳೊಂದಿಗೆ ಈಗಾಗಲೇ ವಿಡಿಯೋ ಸಂವಾದ ನಡೆಸಿ ಅನೇಕ ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಸ್ಥಳೀಯ ಸ್ಥಿತಿಗತಿ ಆಧರಿಸಿ ನಿರ್ಧಾರಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸಿಎಂ ಅವರು ಸೂಚನೆ ನೀಡಿದ್ದು, ಅದರನ್ವಯ ನಮ್ಮ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಕೋವಿಡ್ ೨ನೇ ಅಲೆಯಲ್ಲಿ ಜಿಲ್ಲೆಯಲ್ಲಿ ೬೦ ಸಾವಿರ ಪ್ರಕರಣಗಳು ದಾಖಲಾಗಿದ್ದವು; ೮ ಸಾವಿರ ಜನರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು; ಸೊಂಕಿತರ ಸಂಖ್ಯೆ ೩ನೇ ಅಲೆಯಲ್ಲಿ ೧ಲಕ್ಷಕ್ಕೇರುವ ಸಾಧ್ಯತೆ ಇದೆ. ಇಷ್ಟು ಪ್ರಕರಣಗಳಿಗೆ ಅಗತ್ಯ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಈಗಾಗಲೇ ೨೦ ಸಾವಿರ ಕೋವಿಡ್ ಕಿಟ್,೧೫ ಸಾವಿರ ರೆಮಡಿಸಿವರ್ ಲಸಿಕೆ ಸೇರಿ ಅಗತ್ಯ ಔಷಧಿಗಳು ಸಮರ್ಪಕವಾಗಿ ನಮ್ಮಲ್ಲಿವೆ; ಬಳ್ಳಾರಿ ಜಿಲ್ಲಾಸ್ಪತ್ರೆ, ವಿಮ್ಸ್, ಟ್ರಾಮಾಕೇರ್, ಹೊಸಪೇಟೆ ಎಂಸಿಎಚ್ ಆಸ್ಪತ್ರೆ, ಹರಪನಳ್ಳಿ, ಹಡಗಲಿ ಸೇರಿದಂತೆ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಅಗತ್ಯವಾದ ಆಕ್ಸಿಜನ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲಾಸ್ಪತ್ರೆ, ವಿಮ್ಸ್, ಟ್ರಾಮಾಕೇರ್‌ಗಳಲ್ಲಿ ಐಸಿಯು ಬೆಡ್‌ಗಳ ವ್ಯವಸ್ಥೆ ಹೆಚ್ಚಿಸಲಾಗುತ್ತಿದೆ ಮತ್ತು ಅಗತ್ಯ ಪ್ರಮಾಣದ ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಿಸಿದ ಜಿಲ್ಲಾಧಿಕಾರಿ ಮಾಲಪಾಟಿ ಅವರು ಕೊರೊನಾ ಸೊಂಕಿತರಿಗಾಗಿ ಜಿಂದಾಲ್ ಬಳಿಯ ತೋರಣಗಲ್ ಕೋವಿಡ್ ಕೇರ್ ಫೀಲ್ಡ್ ಆಸ್ಪತ್ರೆ ಮುಂದುವರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್, ಸಹಾಯಕ ಆಯುಕ್ತ ಆಕಾಶ ಶಂಕರ್, ಡಿಎಚ್‌ಒ ಡಾ.ಜನಾರ್ಧನ್, ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ, ಜಿಲ್ಲಾ ಶಸ್ತçಚಿಕಿತ್ಸಕ ಡಾ.ಬಸರೆಡ್ಡಿ ಮತ್ತಿತರರು ಇದ್ದರು.