ಕೊಪ್ಪಳ: ಕೆಪಿಎಸ್ಸಿ ಕಾರ್ಯದರ್ಶಿಯಾಗಿ ವರ್ಗಾವಣೆಯಾಗಿರುವ ಕೊಪ್ಪಳ ನಿರ್ಗಮಿತ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರಿಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಸನ್ಮಾನ ಸ್ವೀಕರಿಸಿದ ನಿರ್ಗಮಿತ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಮಾತನಾಡಿ, ನಾವು ನಮ್ಮ ಕರ್ತವ್ಯವನ್ನು ಅರ್ಥಮಾಡಿಕೊಳ್ಳದೆ ಸಮಯವನ್ನು ತೆಗೆದುಕೊಂಡರೆ ಒಳ್ಳೆಯದಲ್ಲ. ಅದಕ್ಕಾಗಿ ನಾವು ಜನಸಾಮಾನ್ಯರಿಗೆ ನಿಗದಿತ ಅವಧಿಯೊಳಗೆ ಸೇವೆ ನೀಡಬೇಕು. ಇಲ್ಲಿಯ ಟೀಮ್ ಉತ್ತಮವಾಗಿದ್ದು, ಕೊಪ್ಪಳ ಜಿಲ್ಲೆಯ ಎಲ್ಲಾ ಅಧಿಕಾರಿಗಳು ನನಗೆ ಉತ್ತಮ ಸಹಕಾರ ನೀಡಿ, ಒಂದು ತಂಡವಾಗಿ ಕಾರ್ಯನಿರ್ವಹಿಸಿ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಸೇವೆ ನೀಡಿದ ತೃಪ್ತಿ ಇದೆ. ಎಲ್ಲರ ಪರಿಶ್ರಮದಿಂದಲೇ ಜಿಲ್ಲಾಡಳಿತಕ್ಕೆ ಒಳ್ಳೆಯ ಹೆಸರಿದೆ ಎಂದು ಹೇಳಿದರು.
ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಆಗಮಿಸಿದ ಸುಂದರೇಶಬಾಬು ಎಂ. ಅವರು ಮಾತನಾಡಿ, ಸಾರ್ವಜನಿಕರ ಸೇವೆಗಾಗಿಯೇ ನಾಗರಿಕ ಸೇವೆ ಇದೆ. ಡಿಸಿ ಹುದ್ದೆಯಲ್ಲಿ ಬಹಳಷ್ಟು ಸೇವೆ ಮಾಡಲು ಅವಕಾಶಗಳಿವೆ. ಜಿಲ್ಲಾಡಳಿತದ ಎಲ್ಲಾ ಇಲಾಖೆಗಳು ನನಗೆ ಸಹಕಾರ ನೀಡಿ, ನಾವೆಲ್ಲರೂ ಒಂದು ತಂಡವಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸೋಣ. ವಿಕಾಸ್ ಕಿಶೋರ್ ಸುರಳ್ಕರ್ ಅವರ ಮುಂದಿನ ವೃತ್ತಿ ಜೀವನ ಸುಖಕರವಾಗಿರಲಿ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಸಿಇಒ ಬಿ.ಫೌಜಿಯಾ ತರನ್ನುಮ್ ಅವರು ಮಾತನಾಡಿ, ನಿರ್ಗಮಿತ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ರವರು ಒಂದು ತಂಡವಾಗಿ ಕರ್ತವ್ಯ ನಿರ್ವಹಿಸಿದಾಗ ಯಶಸ್ಸುಗಳಿಸುವುದು ಸುಲಭ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಅವರ ಸ್ನೇಹಪರತೆ, ವೃತ್ತಿಪರತೆ, ದೃಢವಿಶ್ವಾಸದ ಕರ್ತವ್ಯ ನಿರ್ವಹಣೆ ಮತ್ತು ಸಾರ್ವಜನಿಕ ಸೇವಾ ಮನೋಭಾವ ಎಲ್ಲರಿಗೂ ಮಾದರಿ ಎಂದರು.