ಬೆಂಗಳೂರು, ಇಡೀ ದೇಶದಲ್ಲಿ75 ವರ್ಷ ಮೀರಿದ ಯಾರಿಗೂ ಬಿಜೆಪಿಯಲ್ಲಿ ಅಧಿಕಾರ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಹಾಗೂ ಜೆ.ಪಿ ನಡ್ಡಾ ನನ್ನ ಬಗ್ಗೆ ವಿಶೇಷ ಕಾಳಜಿ ತೋರಿಸಿ ಅಧಿಕಾರ ನೀಡಿದ್ದಾರೆ. ಜುಲೈ 26 ಕ್ಕೆ ನಾನು ಎರಡು ವರ್ಷ ಅಧಿಕಾರ ಪೂರೈಸುತ್ತೇನೆ. ಕೇಂದ್ರದ ನಾಯಕರು ನೀಡಿದ ಸೂಚನೆ ಪಾಲಿಸಲು ಸಿದ್ದ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 25 ರಂದು ಸರ್ಕಾರ ಎರಡು ವರ್ಷ ಪೂರೈಸಲಿದೆ. ಅಂದು ಹೈಕಮಾಂಡ್ ಯಾವ ಸಂದೇಶ ಕಳುಹಿಸುತ್ತದೋ ಅದನ್ನು ನಾನು ಪಾಲಿಸುತ್ತೇನೆ. ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತೇನೆ.ಬಿಜೆಪಿಯ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬಾರದು. ರಾಜ್ಯದ ವಿವಿಧ ಮಠಾಧೀಶರು ನನ್ನ ಬಗ್ಗೆ ತೋರಿಸಿದ ವಿಶೇಷ ಕಾಳಜಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಮುಂದಿನ ದಿನಗಳಲ್ಲಿ ಪಕ್ಷವನ್ನು ಸದೃಢಗೊಳಿಸಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ನನ್ನ ಗುರಿಯಾಗಿದೆ. ಪಕ್ಷದ ಹೈಕಮಾಂಡ್ ನನಗೆ ಯಾವ ಸೂಚನೆ ನೀಡಿದರೂ ಪಾಲಿಸುತ್ತೇನೆ. ನನ್ನ ಪರವಾಗಿ ಯಾರೂ ಸಹ ಹೇಳಿಕೆ ನೀಡುವುದು ಬೇಡ. ಕಾರ್ಯಕರ್ತರು, ಅಭಿಮಾನಿಗಳು ಪ್ರತಿಭಟನೆ ನಡೆಸದಂತೆ ಸಿಎಂ ಮನವಿ ಮಾಡಿದರು.