ಹೈದರಾಬಾದ್: ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಗುರುವಾರ ಎನ್‌ಡಿಎ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ಸೂಚಿಸಿದ್ದಾರೆ.
ರಾಜ್ಯ ಸರ್ಕಾರದ ಅಧಿಕೃತ ಹೇಳಿಕೆಯ ಪ್ರಕಾರ, ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಪ್ರಾತಿನಿಧ್ಯಕ್ಕೆ ಅವರು ಯಾವಾಗಲೂ ನೀಡುತ್ತಿರುವ ಪ್ರಾಮುಖ್ಯತೆಗೆ ಅನುಗುಣವಾಗಿ ಈ ಗೌರವ ಬಂದಿದೆ ಎಂದು ಸಿಎಂ ಜಗನ್ ನಂಬಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ, ಜಗನ್ ಅವರು ಕೂಡ ಈ ಸಮುದಾಯಗಳ ಉನ್ನತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಈ ಹಿಂದೆ ನಿಗದಿಯಾಗಿದ್ದ ಸಂಪುಟ ಸಭೆಯಿಂದಾಗಿ ದ್ರೌಪದಿ ಮುರ್ಮು ಅವರ ನಾಮಪತ್ರ ಸಲ್ಲಿಕೆಗೆ ಸಿಎಂ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಬದಲಾಗಿ, ರಾಜ್ಯಸಭಾ ಸದಸ್ಯ ಮತ್ತು ಪಕ್ಷದ ಸಂಸದೀಯ ವ್ಯವಹಾರಗಳ ನಾಯಕರಾದ ವಿಜಯಸಾಯಿ ರೆಡ್ಡಿ ಮತ್ತು ಲೋಕಸಭಾ ಸದಸ್ಯ ಮಿಧುನ್ ರೆಡ್ಡಿ ಅವರು ಹಾಜರಾಗಬೇಕು ಎಂದು ಜಗನ್ ಮೋಹನ್ ರೆಡ್ಡಿ ತಾಕೀತು ಮಾಡಿದ್ದಾರೆ.