ಬೆಂಗಳೂರು: ನಮ್ಮ ರಾಜ್ಯದಿಂದ ಅಮರನಾಥ ಯಾತ್ರೆಗೆ ನೂರಕ್ಕೂ ಹೆಚ್ಚು ಜನರು ತೆರಳಿದ್ದು, ಬಹುತೇಕ ಎಲ್ಲರೂ ಸುರಕ್ಷಿತವಾಗಿ ಇದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ನಗರದ ಆರ್ ಟಿ ನಗರದಲ್ಲಿ ಮಾತನಾಡಿದ ಅವರು, ನಾವು ಅಲ್ಲಿನ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಜತೆ ಸಂಪರ್ಕದಲ್ಲಿ ಇದ್ದೇವೆ. ನಾವು ತುರ್ತು ಹೆಲ್ಪ್ ಲೈನ್ ತೆರೆದಿದ್ದೇವೆ. ಹೆಲ್ಪ್ ಲೈನ್ ಗೆ ಹದಿನೈದು ಇಪ್ಪತ್ತು ಜನ ಈಗಾಗಲೇ ಕರೆ ಮಾಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮಾಡ್ತಿದ್ದೇವೆ. ಕೇಂದ್ರ ಸರ್ಕಾರದ ಬಿಎಸ್ಎಫ್ ನವ್ರೂ ಸ್ಥಳದಲ್ಲಿ ಇದ್ದಾರೆ. ನಮ್ಮ ಮುಖ್ಯ ಕಾರ್ಯದರ್ಶಿ ಕೇಂದ್ರ ಸರ್ಕಾರದ ಸಂಪರ್ಕದಲ್ಲಿ ಇದ್ದಾರೆ. ಮೇಘಸ್ಫೋಟದಲ್ಲಿ ೧೫ ಜನ ಯಾತ್ರಿಕರು ಸಾವನ್ನಪ್ಪಿದ್ದಾರೆ. ಸಾಮಾನ್ಯವಾಗಿ ಪ್ರತೀವರ್ಷ ಕನ್ನಡಿಗರು ಯಾತ್ರೆಗೆ ಹೋಗ್ತಾರೆ. ಈ ಬಾರಿಯೂ ತೆರಳಿದ ಕನ್ನಡಿಗರು, ಏನೇ ಮಾಹಿತಿ, ಸುದ್ದಿ ಇದ್ರೂ ನಮ್ಮ ಹೆಲ್ಪ್ ಲೈನ್ ಗೆ ಕರೆ ಮಾಡಲಿ. ಕೂಡಲೇ ರಕ್ಷಣಾ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.