ಕಾಬೂಲ್, ಅ 25 (ಯುಎನ್ ಐ)- ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡನಂತರ ಆ ದೇಶದ ಜನರ ಪರಿಸ್ಥಿತಿ ಶೋಚನೀಯ ಸ್ಥಿತಿಗೆ ತಲುಪಿದೆ. ಮೊನ್ನೆಯವರೆಗೂ ತಾಲಿಬಾನಿಗಳ ದೌರ್ಜನ್ಯ, ಅಕೃತ್ಯ , ಹಿಂಸೆಗಳನ್ನು ಸಹಿಸಿಕೊಂಡು ಬದುಕುತ್ತಿದ್ದ ಅಫ್ಘನ್ ಜನರು ಹೊಸದಾಗಿ ಆಹಾರ ಲಭ್ಯವಾಗದೆ ಹಸಿವಿನಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿದ್ದು ಭವಿಷ್ಯ ದುಸ್ಥಿತಿಯತ್ತ ಸಾಗುತ್ತಿದೆ
ಪಶ್ಚಿಮ ಕಾಬೂಲ್‌ನಲ್ಲಿ ಹಜಾರ ಸಮುದಾಯದ ಎಂಟು ಮಕ್ಕಳು ಹಸಿವಿನಿಂದ ಸಾವನ್ನಪ್ಪಿವೆ. ಈ ವಿಷಯವನ್ನು ಅಫ್ಘಾನಿಸ್ತಾನದ ಮಾಜಿ ಶಾಸನ ಸಭಾ ಸದಸ್ಯ ಮೊಹಮದ್ ಮೊಹಖೇಕ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ತಾಲಿಬಾನಿಗಳು ಅಧಿಕಾರಕ್ಕೆ ಬಂದ ನಂತರ ಅಫ್ಘಾನ್ ಜನರಿಗೆ ಸಾಕಷ್ಟು ಜೀವನ ಮಟ್ಟ ಕಲ್ಪಿಸಲು ವಿಫಲವಾಗಿದ್ದಾರೆ ಎಂದು ಅವರು ಟೀಕಿಸಿದ್ದಾರೆ. ಅಫ್ಘಾನಿಸ್ತಾನದ ಅಲ್ಪಸಂಖ್ಯಾತ ಗುಂಪುಗಳಾದ ಹಜಾರಾ, ಶಿಯಾ ಸಮುದಾಯದ ಪರವಾಗಿ ನಿಲ್ಲುವಂತೆ ಅಂತರಾಷ್ಟ್ರೀಯ ಸಮುದಾಯಕ್ಕೆ ಅವರು ಮನವಿ ಮಾಡಿದ್ದಾರೆ.
ಶಿಯಾ ಇಸ್ಲಾಂ ಧರ್ಮ ಅನುಸರಿಸುವ ಹಜಾರಾ ಗುಂಪಿನ ಜನರು ಅಫ್ಘಾನಿಸ್ತಾನದ ಜನಸಂಖ್ಯೆ ಶೇ 9 ರಷ್ಟಿದ್ದಾರೆ. ಹಕ್ಕುಗಳ ಸಂಘಟನೆಗಳ ಪ್ರಕಾರ, ಅವರು ಈ ಹಿಂದೆ ತಾಲಿಬಾನಿಗಳಿಂದ ತೀವ್ರ ಕಿರುಕುಳಕ್ಕೆ ಒಳಗಾಗಿದ್ದರು. ಕಳೆದ ಆಗಸ್ಟ್ ಮಧ್ಯದಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ನಂತರ ದೇಶದಲ್ಲಿ ಜನರ ಜೀವನ ಪರಿಸ್ಥಿತಿ ಕ್ಷೀಣಿಸಲಿದೆ ಎಂದು ಹಲವು ಅಂತಾರಾಷ್ಟ್ರೀಯ ಗುಂಪುಗಳು ಮೊದಲಿನಿಂದಲೂ ಎಚ್ಚರಿಸುತ್ತಲೇ ಬಂದಿವೆ.