ಕಳೆದ ವರ್ಷವೇ ತೆರೆಗೆ ಬರಬೇಕಿದ್ದ ‘ನನ್ ಗುರಿ ವಾರೆಂಟ್’ ಸಿನಿಮಾ ಶುಕ್ರವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಬಹು ದಿನಗಳ ನಂತರ ಜೆ.ಕೆ. ಅಲಿಯಾಸ್ ಜಯರಾಂ ಕಾರ್ತಿಕ್ ತೆರೆಮೇಲೆ ನಾಯಕರಾಗಿ ಈ ಚಿತ್ರದ ಮುಖೇನ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ಹಾಗೂ ಸಾಹಿತಿ ಎಸ್.ಕೆ. ನಾಗೇಂದ್ರ ಅರಸ್ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಮನೀಷಾ ವೈಗನ್‍ಕರ್ ಈ ಚಿತ್ರದ ನಾಯಕಿ ಹಾಗೂ ನಿರ್ಮಾಪಕಿ ಕೂಡ. ಮೂಲತಃ ಕಾರವಾರದವರಾದ ಮನೀಷಾ ಅವರಿಗೆ ಬಾಲ್ಯದಿಂದಲೂ ಚಿತ್ರರಂಗದೆಡೆಗೆ ತೀವ್ರ ಆಸಕ್ತಿ. ಸದ್ಯ ಬಾಂಬೆಯಲ್ಲಿ ನೆಲೆಸಿರುವ ಮನೀಷ್ ವೈಗನ್‍ಕರ್ ಅವರು ತಾವೇ ಒಂದು ಕಥೆಯನ್ನು ಬರೆದು ಚಿತ್ರಕ್ಕೆ ಬಂಡವಾಳವನ್ನೂ ಹಾಕಿದ್ದಾರೆ. ತಾನು ಬಣ್ಣ ಹಚ್ಚಬೇಕೆಂಬ ಬಹುದಿನಗಳ ಕನಸನ್ನೂ ಕೂಡ ಈ ಚಿತ್ರದ ಮೂಲಕ ಈಡೇರಿಸಿಕೊಂಡಿದ್ದಾರೆ.
ಆ್ಯಕ್ಷನ್ ಹಿನ್ನೆಲೆಯಲ್ಲಿ ನಡೆಯುವ ರಿವೇಂಜ್ ಕಥಾಹಂದರ ಇದಾಗಿದ್ದು, ಚಿತ್ರದಲ್ಲಿ ನಾಯಕಿ ಮನಿಷಾ ಅವರು ಆ್ಯಕ್ಷನ್ ಹಾಗೂ ಗ್ಲಾಮರಸ್ ಹೀಗೆ ಎರಡು ರೀತಿಯ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೇಜರ್ ಪೆÇೀರ್ಷನ್ ವಿದೇಶದಲ್ಲಿ ನಡೆಯುವುದರಿಂದ ಚಿತ್ರಕ್ಕೆ ಬ್ಯಾಂಕಾಕ್‍ನಲ್ಲಿ 13 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಅಲ್ಲದೆ 20 ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ವಾರೆಂಟ್ ಚಿತ್ರವನ್ನು ಸೆರೆಹಿಡಿಯಲಾಗಿದೆ. ಬಿಡುಗಡೆಗೂ ಮುನ್ನ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ನಾಗೇಂದ್ರ ಅರಸ್ ‘ಆರಂಭದಲ್ಲಿ ಚಿತ್ರಕ್ಕೆ ವಾರೆಂಟ್ ಅಂತಲೇ ಶೀರ್ಷಿಕೆಯಿತ್ತು. ಆಂಗ್ಲ ಟೈಟಲ್ ಇದ್ದರೆ ಸೆಬ್ಸಿಡಿ ಸಿಗಲ್ಲ ಎಂದು ನನ್‍ಗುರಿ ವಾರೆಂಟ್ ಎಂದು ಬದಲಿಸಬೇಕಾಯಿತು. ಜೆಕೆ, ರಾಂಧವ ಹಾಗೂ ಮನೀಷ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೆಕೆ ಜೊತೆ ಈಗಾಗಲೆ ಸಿನಿಮಾ ಮಾಡಿದ್ದರೂ ತಾಂಡವ್ ಜೊತೆ ಮೊದಲಬಾರಿಗೆ ಕೆಲಸ ಮಾಡಿದ್ದೇನೆ. ಮನೀಷ್ ಅವರೇ ಕಥೆ, ಚಿತ್ರಕಥೆ ಬರೆದಿದ್ದು, ನಾನು ನಿರ್ದೇಶನ ಹಾಗೂ ಎಡಿಟಿಂಗ್ ಮಾತ್ರ ನಿರ್ವಹಿಸಿದ್ದೇನೆ. ಈ ಚಿತ್ರ ಮೂರು ವರ್ಷಗಳ ಹಿಂದೆಯೇ ಆರಂಭವಾಗಿದ್ರೂ ಬಿಡುಗಡೆ ಮಾಡಬೇಕೆನ್ನುವ ಹೊತ್ತಿಗೆ ಕೋವಿಡ್ ಎದುರಾಯ್ತು. ಹಾಗಾಗಿ ರಿಲೀಸ್ ಮತ್ತೆ ಒಂದು ವರ್ಷ ಲೇಟಾಯ್ತು. ಈ ಶುಕ್ರವಾರ ವಿಜಯ್ ಸಿನಿಮಾಸ್ ಮೂಲಕ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ’ ಎಂದು ಹೇಳಿದರು.
ಚಿತ್ರದ ನಾಯಕಿ ಹಾಗೂ ನಿರ್ಮಾಪಕಿ ಮನೀಷಾ ವೈಗನ್‍ಕರ್ ಮಾತನಾಡುತ್ತ ‘ನಾನು ಕನ್ನಡ ನಾಡಲ್ಲೇ ಹುಟ್ಟಿದವಳು, ರಾಜ್ಯ ಹಾಗೂ ಭಾಷೆಯ ಮೇಲಿರುವ ಪ್ರೀತಿ ಮತ್ತು ಅಭಿಮಾನದಿಂದ ಈ ಚಿತ್ರ ಮಾಡಿದ್ದೇನೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಕಮರ್ಷಿಯಲ್ ಎಲಿಮೆಂಟ್ ಒಳಗೊಂಡಿರುವ ಚಿತ್ರ. ಬೇಟಿ ಬಚಾವೋ ಬೇಟಿ ಪಢಾವೋ ಅಲ್ಲದೆ ಮಹಿಳೆಯರು ಅಬಲೆಯರಲ್ಲ ಎನ್ನುವ ಕಂಟೆಂಟ್ ಮೇಲೆ ಚಿತ್ರದ ಕಥೆ ಸಾಗುತ್ತದೆ. ಒಬ್ಬ ರೈತ ತನ್ನ ಮಕ್ಕಳ ಮೇಲೆ ಹೇಗೆಲ್ಲಾ ಕೇರ್ ತಗೊಳ್ಳುತ್ತಾನೆ ಎಂದು ಚಿತ್ರದಲ್ಲಿ ಹೇಳಿದ್ದೇವೆ. ಜೆಕೆ ಅವರದು ನೆಗೆಟಿವ್ ಷೇಡ್ ಪಾತ್ರ, ಯಾರು ಯಾರಿಗೆ ವಾರೆಂಟ್ ನೀಡುತ್ತಾರೆ ಎನ್ನುವುದೇ ಚಿತ್ರದ ಕಥೆ, ಅಲ್ಲದೆ ಮುಂದೆ ಸಾಕಷ್ಟು ಚಿತ್ರಗಳನ್ನು ನಿಮಿಸುವ ಯೋಜನೆಯಿದೆ’ ಎಂದರು.
ನಂತರ ಜೋಡಿಹಕ್ಕಿ ಖ್ಯಾತಿಯ ಮನೀಶ್ ಮಾತನಾಡಿ ಪಾತ್ರದ ಬಗ್ಗೆ ಹೆಚ್ಚೇನೂ ಹೇಳಲಾರೆ, ಚಿತ್ರ ತುಂಬಾ ಚೆನ್ನಾಗಿ ಬಂದಿದೆ ಎಂದಷ್ಟೇ ಹೇಳಿದರು. ಈ ಚಿತ್ರದ ಹಾಡುಗಳಿಗೆ ವಿ.ಮನೋಹರ್ ಹಾಗೂ ಮ್ಯಾಥೂಸ್ ಮನು ಸಂಗೀತ ನಿರ್ದೇಶನ ಮಾಡಿದ್ದಾರೆ.