ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇದೇ ಮಾರ್ಚ್ 26ರ ಶನಿವಾರದಿಂದ ಆರಂಭವಾಗುತ್ತಿದ್ದು, ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದ ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳು ಸೆಣಸಾಟವನ್ನು ನಡೆಸಲಿವೆ.
ಇನ್ನು ಎಲ್ಲಾ ತಂಡಗಳ ಆಟಗಾರರು ಈಗಾಗಲೇ ಟೂರ್ನಿಗಾಗಿ ಬೇಕಾಗಿರುವ ಅಭ್ಯಾಸಗಳನ್ನು ಆರಂಭಿಸಿದ್ದು, ತಯಾರಿಗಳನ್ನು ನಡೆಸಿಕೊಳ್ಳುತ್ತಿವೆ. ಹೀಗೆ ವಿವಿಧ ತಂಡಗಳ ಹಲವಾರು ಆಟಗಾರರು ತಮ್ಮ ತಮ್ಮ ತಂಡಗಳ ಕ್ಯಾಂಪ್ ಸೇರಿ ಅಭ್ಯಾಸ ನಡೆಸುತ್ತಿದ್ದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರನಾದ ಮೊಯಿನ್ ಅಲಿ ಮಾತ್ರ ಇನ್ನೂ ಕೂಡ ಭಾರತ ತಲುಪಲಾಗದೇ ತನ್ನ ತವರಿನಲ್ಲಿಯೇ ಇದ್ದಾರೆ. ಭಾರತಕ್ಕೆ ಪ್ರಯಾಣಿಸಲು ಅಗತ್ಯವಾದ ವೀಸಾ ಸಿಗದ ಕಾರಣ ಮೊಯಿನ್ ಅಲಿ ಇನ್ನೂ ಭಾರತ ಪ್ರವಾಸ ಕೈಗೊಂಡಿಲ್ಲ ಎಂಬ ಹೇಳಿಕೆಯನ್ನು ಸ್ವತಃ ಚೆನ್ನೈ ಸೂಪರ್ ಕಿಂಗ್ಸ್‌ನ ಸಿಇಒ ಕಾಶಿ ವಿಶ್ವನಾಥನ್ ತಿಳಿಸಿದ್ದಾರೆ. ಹಾಗೂ ಈ ಕುರಿತಾಗಿ ಬಿಸಿಸಿಐ ಜೊತೆಗೂ ಸಹ ಚರ್ಚಿಸಿರುವ ಕಾಶಿ ವಿಶ್ವನಾಥನ್ ಇನ್ನೆರಡು ದಿನಗಳಲ್ಲಿ ಮೊಯಿನ್ ಅಲಿಗೆ ವಿಸಾ ಸಿಗಲಿದೆ ಎಂದಿದ್ದಾರೆ. ಹೀಗೆ ಮೊಯಿನ್ ಅಲಿಗೆ ವಿಸಾ ಸಿಕ್ಕರೂ ಸಹ ಕ್ವಾರಂಟೈನ್ ನಿಯಮ ಅನುಸರಿಸಬೇಕಾಗಿರುವ ಕಾರಣ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಮೊಯಿನ್ ಅಲಿ ಅಲಭ್ಯರಾಗಲಿದ್ದು, ಮೊಯಿನ್ ಅಲಿ ಬದಲಾಗಿ ಈ ಕೆಳಕಂಡ ಮೂವರು ಆಟಗಾರರು ಕಣಕ್ಕಿಳಿಯುವ ಸಾಧ್ಯತೆಗಳಿವೆ.
- ರಾಬಿನ್ ಉತ್ತಪ್ಪ ಈ ಹಿಂದಿನ ಕೆಲ ಪಂದ್ಯಗಳಲ್ಲಿ 3 ವಿದೇಶಿ ಆಟಗಾರರನ್ನೊಳಗೊಂಡ ಆಡುವ ಬಳಗದೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಕಣಕ್ಕಿಳಿದಿದ್ದ ಉದಾಹರಣೆಗಳಿವೆ. ಅದೇ ರೀತಿ ಈ ಬಾರಿಯೂ ಕೂಡ 3 ವಿದೇಶಿ ಆಟಗಾರರು ಇರಲಿರುವ ತಂಡದೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಕಣಕ್ಕಿಳಿಯುವ ಸಾಧ್ಯತೆಗಳಿದ್ದು, ಮೊಯಿನ್ ಅಲಿ ಬದಲಾಗಿ ರಾಬಿನ್ ಉತ್ತಪ್ಪ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಇನ್ನು ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ರಾಬಿನ್ ಉತ್ತಪ್ಪ ಅವರನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 2 ಕೋಟಿಗೆ ಖರೀದಿ ಮಾಡಿತ್ತು.
- ಎನ್ ಜಗದೀಶನ್ 2018ರ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿರುವ ಎನ್ ಜಗದೀಶನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ 20 ಲಕ್ಷಕ್ಕೆ ಈ ಬಾರಿಯ ಮೆಗಾ ಹರಾಜಿನಲ್ಲಿ ಖರೀದಿಸಿ ಮತ್ತೆ ತಂಡಕ್ಕೆ ಸೇರಿಸಿಕೊಂಡಿದೆ. ಇನ್ನು ಎನ್ ಜಗದೀಶನ್ ಇತ್ತೀಚೆಗಷ್ಟೇ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ತಮಿಳುನಾಡಿನ ಪರ 8 ಪಂದ್ಯಗಳನ್ನಾಡಿ 204 ರನ್ ಬಾರಿಸುವ ಮೂಲಕ ಟೂರ್ನಿಯಲ್ಲಿ ತಮಿಳುನಾಡು ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಹೀಗೆ ಉತ್ತಮ ಪ್ರತಿಭೆಯನ್ನು ಹೊಂದಿರುವ ಎನ್ ಜಗದೀಶನ್ ಅವರಿಗೆ ಮೊಯಿನ್ ಅಲಿ ಅನುಪಸ್ಥಿತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆಗಳು ಇವೆ.
- ಮಿಚೆಲ್ ಸ್ಯಾಂಟ್ನರ್ ಈ ಬಾರಿಯ ಮೆಗಾ ಹರಾಜಿನಲ್ಲಿ 1.9 ಕೋಟಿಗೆ ಮಿಚೆಲ್ ಸ್ಯಾಂಟ್ನರ್ ಅವರನ್ನು ಖರೀದಿಸಿದ ಚೆನ್ನೈ ಸೂಪರ್ ಕಿಂಗ್ಸ್ ಆತನನ್ನು ಮತ್ತೆ ತಂಡಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದೆ. ಆಲ್ ರೌಂಡರ್ ಆಟಗಾರನಾಗಿರುವ ಮಿಚೆಲ್ ಸ್ಯಾಂಟ್ನರ್ ಮೊಯಿನ್ ಅಲಿ ಬದಲಾಗಿ ಕಣಕ್ಕಿಳಿಯಲು ತಕ್ಕನಾದ ಆಟಗಾರನಾಗಿದ್ದಾರೆ. ಆದರೆ ಮೂರನೇ ಕ್ರಮಾಂಕದಲ್ಲಿ ಮಿಚೆಲ್ ಸ್ಯಾಂಟ್ನರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಕಣಕ್ಕಿಳಿಸುವುದು ಅನುಮಾನವಾಗಿದ್ದು, ಮೊಯಿನ್ ಅಲಿ ಬದಲಾಗಿ ಯಾವ ಆಟಗಾರನನ್ನು ಕಾಯ್ದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.