ಭಾರತ ಮಹಿಳೆಯರ ತಂಡ ಹಾಗೂ ಇಂಗ್ಲೆಂಡ್ ಮಹಿಳೆಯರ ತಂಡ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು ಸಮಬಲದ ಹೋರಾಟ ನಡೆಯುತ್ತಿದೆ. ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ಆತಿಥೇಯ ಇಂಗ್ಲೆಂಡ್ ತಂಡ 396 ರನ್‍ಗಳಿಗೆ 9 ವಿಕೆಟ್ ಕಳೆದುಕೊಂಡು ಡಿಕ್ಲೇರ್ ಮಾಡಿಕೊಂಡಿದೆ. ನಂತರ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆರಂಭಿಕ ಜೋಡಿಯಿಂದ ಅದ್ಭುತ ಆರಂಭ ದೊರೆಯಿತು. ಭಾರತೀಯ ಮಹಿಳಾ ತಂಡದ ಆರಂಭಿಕ ಜೋಡಿಯಾದ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಜೋಡಿ ಇಂಗ್ಲೆಂಡ್ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಾ ಸಾಗಿತು. ಮೊದಲ ವಿಕೆಟ್‍ಗೆ ಭರ್ಜರಿ 167 ರನ್‍ಗಳ ಜೊತೆಯಾಟವನ್ನು ನೀಡಿತು ಈ ಜೋಡಿ.ನಂತರ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕಕದ ಅಂಚಿಗೆ ತಲುಪಿದ್ದ ಶಫಾಲಿ ವರ್ಮಾ 96 ರನ್‍ಗಳಿಸಿ ಔಟಾದರು. ನಂತರ ಸ್ಮೃತಿ ಮಂಧಾನ ಕೂಡ 78 ರನ್‍ಗಳಿಸಿ ವಿಕೆಟ್ ಕಳೆದುಕೊಂಡರು.
ಆದರೆ ಬಳಿಕ ಹಠಾತ್ ಕುಸಿತ ಕಾಣಲು ಆರಂಭಿಸಿತು. ಶಿಖಾ ಪಾಂಡೆ, ಮಿಥಾಲಿ ರಾಜ್ ಹಾಗೂ ಪೂನಮ್ ರಾವತ್ ಒಬ್ಬರ ಹಿಂದೊಬ್ಬರಂತೆ ವಿಕೆಟ್ ಕಳೆದುಕೊಂಡು ಫೆವಿಲಿಯನ್ ಸೇರಿದರು. ಈ ಮೂಲಕ 183 ರನ್‍ಗಳಿಸುವಷ್ಟರಲ್ಲಿ 5 ಕಳೆದುಕೊಂಡಿದೆ. ಸದ್ಯ ಎರಡನೇ ದಿನದಾಟ ಅಂತ್ಯವಾಗಿದ್ದು ಭಾರತ 187 ರನ್‍ಗಳಿಸಿ 5 ವಿಕೆಟ್ ಕಳೆದುಕೊಂಡಿದೆ. 209 ರನ್‍ಗಳ ಹಿನ್ನೆಡೆಯನ್ನು ಅನುಭವಿಸುತ್ತಿದೆ.ಹರ್ಮನ್‍ಪ್ರೀತ್ ಕೌರ್ ಹಾಗೂ ದೀಪ್ತಿ ಶರ್ಮಾ ಕ್ರೀಸ್‍ನಲ್ಲಿದ್ದು ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ ಇನ್ನು ಇದಕ್ಕೂ ಮುನ್ನ ಭಾರತೀಯ ಮಹಿಳಾ ತಂಡದ ಪರವಾಗಿ ಬೌಲಿಂಗ್‍ನಲ್ಲಿ ಸ್ನೇಹಾ ರಾಣಾ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ಇಂಗ್ಲೆಂಡ್ ತಂಡದ ನಾಲ್ಕು ವಿಕೆಟ್ ಕೀಳುವ ಮೂಲಕ ಇಂಗ್ಲೆಂಡ್ ಆಟಗಾರ್ತಿಯರ ಓಟಕ್ಕೆ ಬ್ರೇಕ್ ಹಾಕಿದರು. ದೀಪ್ತಿ ಶರ್ಮಾ 3 ವಿಕೆಟ್ ಪಡೆದರೆ ಪೂಜಾ ವಸ್ತ್ರಾಕರ್ ಹಾಗೂ ಜೂಲನ್ ಗೋಸ್ವಾಮಿ ತಲಾ ಒಂದು ವಿಕೆಟ್ ಪಡೆದಿದ್ದಾರೆ. ಇಂಗ್ಲೆಂಡ್ ತಂಡದ ಪರವಾಗಿ ನಾಯಕಿ ಹೀದರ್ ನೈಟ್ 95 ರನ್‍ಗಳಿಸಿ ಔಟಾದರು. ಉಳಿದಂತೆ ಆರಂಭಿಕ ಆಟಗಾರ್ತಿ ಬ್ಯೂಮೊಂಟ್ ಹಾಗೂ ಸೋಫಿಯಾ ಡುಂಕ್ಲೆ ಅರ್ಧ ಶತಕದ ಕೊಡುಗೆಯನ್ನು ನೀಡಿ ಇಂಗ್ಲೆಂಡ್ ತಂಡ 400 ರ ಗಡಿ ತಲುಪಲು ಕಾರಣರಾದರು.