ವಿಶ್ವದ ನಂಬರ್ 1 ಮಹಿಳಾ ಸಿಂಗಲ್ಸ್ ಆಟಗಾರ್ತಿ ಆ್ಯಶ್ ಬಾರ್ಟಿ ಟೆನ್ನಿಸ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಈ ಮೂಲಕ ಟೆನಿಸ್ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ ಬಾರ್ಟಿ. ಕಣ್ಣೀರಿಡುತ್ತಲೇ ತಮ್ಮ ನಿವೃತ್ತಯ ಸಂಗತಿಯನ್ನು ಆ್ಯಶ್ ಬಾರ್ಟಿ ಘೋಷಣೆ ಮಾಡಿದ್ದಾರೆ. ತನ್ನ ಗೆಳತಿ ಕೆಸ್ಸೆ ಡೆಲಕ್ವಾ ಜೊತೆಗೆ ಸಂವಾದದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಬಾರ್ಟಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಈ ವಿಡಿಯೋವನ್ನು ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಇದನ್ನು ಹೇಳುವುದು ಬಹಳ ಕಷ್ಟ.
ಆದರೆ ನಾನು ಬಹಳ ಸಂತೋಷವಾಗಿದ್ದೇನೆ ಹಾಗೂ ಈ ನಿರ್ಧಾರಕ್ಕೆ ಸಿದ್ಧವಾಗಿದ್ದೇನೆ. ಈ ಕ್ಷಣದಲ್ಲಿ ಓರ್ವ ವ್ಯಕ್ತಿಯಾಗಿ ಇದು ನಾನು ತೆಗೆದುಕೊಳ್ಳುತ್ತಿರುವ ಸೂಕ್ತವಾದ ನಿರ್ಧಾರ ಎಂದು ನನ್ನ ಹೃದಯ ಹೇಳುತ್ತಿದೆ” ಎಂದಿದ್ದಾರೆ ಆ್ಯಶ್ ಬಾರ್ಟಿ.
ಆ್ಯಶ್ ಬಾರ್ಟಿ ಟೆನಿಸ್ ವೃತ್ತಿ ಜೀವನ: ಆ್ಯಶ್ ಬಾರ್ಟಿ ಪ್ರಸ್ತುತ ವಿಶ್ವದ ನಂಬರ್ 1 ಟೆನಿಸ್ ಆಟಗಾರ್ತಿ. ಆಸ್ಟ್ರೇಲಿಯಾ ಮೂಲದ ಇವರು ವಿಶ್ವ ಟೆನಿಸ್‌ನಲ್ಲಿ ಈ ಅಗ್ರಸ್ಥಾನಕ್ಕೇರಿದ ಆಸಿಸ್ ಮೂಲದ ಕೇವಲ 2ನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ. ಇದಕ್ಕೂ ಮುನ್ನ ಇವೊನ್ ಗೂಲಾಗಾಂಗ್ ಕಾವ್ಲಿ ನಂಬರ್ 1 ಆಟಗಾರ್ತಿಯಾಗುವ ಮೂಲಕ ಆಸ್ಟ್ರೇಲಿಯಾ ಪರವಾಗಿ ಈ ಸಾಧನೆ ಮಾಡಿದ ಮೊದಲ ಆಟಗಾರ್ತಿಯಾಗಿದ್ದರು. ಆಸ್ಟ್ರೇಲಿಯನ್ ಓಪನ್ ಗೆದ್ದು 2 ತಿಂಗಳೂ ಆಗಿಲ್ಲ: ಆಸ್ಟ್ರೇಲಿಯಾದ ಪ್ರತಿಭಾನ್ವಿತ ಟೆನಿಸ್ ಆಟಗಾರ್ತಿ ಇತ್ತೀಚೆಗಷ್ಟೇ ಟೆನಿಸ್‌ನಲ್ಲಿ ಮಹತ್ವದ ಸಾಧನೆ ಮಾಡಿದ್ದರು. ಆಸ್ಟ್ರೇಲಿಯನ್ ಓಪನ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದರು ಆ್ಯಶ್ ಬಾರ್ಟಿ. 1978ರ ನಂತರ ಆಸ್ಟ್ರೇಲಿಯ್ ಓಪನ್ ಪ್ರಶಸ್ತಿ ಗೆದ್ದ ಮೊದಲ ಆಸ್ಟ್ರೇಲಿಯಾದ ಆಟಗಾರ್ತಿ ಎಂಬ ಹೆಗ್ಗಳಿಕೆ ಅವರು ಪಾತ್ರವಾಗಿದ್ದಾರೆ. ಆದರೆ ಅದಾಗಿ ಎರಡು ತಿಂಗಳಿಗೂ ಮುನ್ನವೇ ನಿವೃತ್ತಿಯನ್ನು ಪ್ರಕಟಿಸಿದ್ದಾರೆ.