ಅವಂತಿಪೋರಾ: ಜಮ್ಮು ಮತ್ತು ಕಾಶ್ಮೀರದ ಅವಂತಿಪೋರಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ವಂಡಕ್ ಪೋರಾ ಪ್ರದೇಶದಲ್ಲಿ ಎನ್‌ಕೌಂಟರ್ ನಡೆದಿದೆ.
ಉಗ್ರರಲ್ಲಿ ಒಬ್ಬನನ್ನು ಕೈಸರ್ ಕೋಕಾ ಎಂದು ಗುರುತಿಸಲಾಗಿದೆ. ಗುಂಡಿನ ಚಕಮಕಿಯಲ್ಲಿ ಭಾಗಿಯಾಗಿರುವ ಮತ್ತೊಬ್ಬ ಉಗ್ರನ ಗುರುತು ದೃಢಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯಾದ ಭಯೋತ್ಪಾದಕನಿಂದ ೧ ಯುಎಸ್ ನಿರ್ಮಿತ ರೈಫಲ್ (ಎಂ-೪ ಕಾರ್ಬೈನ್), ೧ ಪಿಸ್ತೂಲ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಗ್ರರ ಉಪಸ್ಥಿತಿಯ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸ್, ಸೇನೆ ಮತ್ತು ಸಿಆರ್ ಪಿಎಫ್ ಜಂಟಿ ತಂಡವು ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಜಂಟಿ ತಂಡವು ಶಂಕಿತ ಸ್ಥಳದ ಕಡೆಗೆ ಶೋಧವನ್ನು ತೀವ್ರಗೊಳಿಸುತ್ತಿದ್ದಂತೆ, ಉಗ್ರರು ಗುಂಡು ಹಾರಿಸಿದರು. ಅದು ಪ್ರತೀಕಾರವಾಗಿ ಎನ್ಕೌಂಟರ್ ಕಾರಣವಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.