ಪ್ಯಾರಿಸ್: ಫ್ರೆಂಚ್ ಓಪನ್ ಫೈನಲ್‍ನಲ್ಲಿ ತಾನು ನೊವಾಕ್ ಜೊಕೋವಿಕ್ ವಿರುದ್ಧ ಸ್ಪರ್ಧಿಸಲು ಇನ್ನು 5 ನಿಮಿಷ ಉಳಿದಿರುವಾಗ ತನ್ನ ಅಜ್ಜಿ ಮೃತರಾಗಿರುವುದಾಗಿ ಗ್ರೀಕ್ ಬಲಿಷ್ಠ ಸ್ಟೆಫಾನೊಸ್ ಸಿಸಿಪಸ್ ಹೇಳಿದ್ದಾರೆ. ಭಾನುವಾರ (ಜೂನ್ 13) ನಡೆದ ಫ್ರೆಂಚ್ ಓಪನ್ ಫೈನಲ್ ಪಂದ್ಯದ ವೇಳೆ ಅಜ್ಜಿ ತೀರಿಕೊಂಡಿರುವುದಾಗಿ ಸಿಟ್ಸಿಪಾಸ್ ತಿಳಿಸಿದ್ದಾರೆ.
ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ವಿಶ್ವ ನಂ.1 ಆಟಗಾರ, ಸರ್ಬಿಯಾದ ನೊವಾಕ್ ಜೊಕೋವಿಕ್ ಮತ್ತು ಸ್ಟೆಫಾನೊಸ್ ಸಿಸಿಪಸ್ ಮಧ್ಯೆ ಸುದೀರ್ಘ ಕಾಳಗ ನಡೆದಿತ್ತು. ಅಂತಿಮವಾಗಿ ಜೊಕೋವಿಕ್ 6-7 (6/8), 2-6, 6-3, 6-2, 6-4ರ ಅಂತರದಿಂದ ಗೆದ್ದಿದ್ದರು. ಇನ್‍ಸ್ಟಾಗ್ರಾಮ್‍ನಲ್ಲಿ ಈ ವಿಚಾರ ತಿಳಿಸಿರುವ ಸಿಸಿಪಸ್, ‘ನಾನು ಕೋರ್ಟ್ ಪ್ರವೇಶಿಸುವ ಐದು ನಿಮಿಷಕ್ಕೆ ಮುನ್ನ ತನ್ನ ಪ್ರೀತಿಯ ಅಜ್ಜಿ ಕೊನೆಯುಸಿರೆಳೆದಿದ್ದರು. ಬದುಕಿನ ಮೇಲೆ ಅಪಾರ ನಂಬಿಕೆ ಇಟ್ಟಿದ್ದ ಮತ್ತು ಇನ್ನೊಬ್ಬರ ನಗುವಿಗೆ ಕಾರಣವಾಗುತ್ತಿದ್ದ ಅಜ್ಜಿಯ ಜಾಗದಲ್ಲಿ ನಾನು ಇನ್ಯಾರನ್ನೇ ನೋಡಲು ಸಾಧ್ಯವಿಲ್ಲ’ ಎಂದು ಬರೆದುಕೊಂಡಿದ್ದರು.
ಈ ಜಗತ್ತಿನಲ್ಲಿ ಅಜ್ಜಿಯಂಥ ಜನರು ಇರುವುದು ಬಹಳ ಮುಖ್ಯ ಎಂದು ಸಿಸಿಪಸ್ ಹೇಳಿದ್ದಾರೆ. ಏಕೆಂದರೆ ಅವರು ನನ್ನನ್ನು ಕನಸು ಕಾಣುವಂತೆ, ಸಾಧಿಸುವಂತೆ ಪ್ರೇರೇಪಿಸುತ್ತಿದ್ದರು ಎಂದಿದ್ದಾರೆ. ಫ್ರೆಂಚ್ ಓಪನ್ ಫೈನಲ್ ಜಯದೊಂದಿಗೆ ಜೊಕೋವಿಕ್ 19ನೇ ಗ್ರ್ಯಾನ್‍ಸ್ಲ್ಯಾಮ್ ಪ್ರಶಸ್ತಿ ಗೆದ್ದಂತಾಗಿದೆ.