ಕೋಪನ್ ಹ್ಯಾಗನ್: ಡೆನ್ಮಾರ್ಕ್‍ನ ಸ್ಟಾರ್ ಆಟಗಾರ ಕ್ರಿಶ್ಚಿಯನ್ ಎರಿಕ್ಸನ್ ಆಟದ ಮಧ್ಯೆಯೇ ಕುಸಿದು ಬಿದ್ದಿರುವ ಆಘಾತಕಾರಿ ಘಟನೆ ನಡೆದಿತ್ತು. ಎರಿಕ್ಸನ್ ಹೀಗೆ ಬೀಳಲು ಕಾರಣ, ಅವರಿಗೆ ಹೃದಯಾಘಾತವಾಗಿತ್ತು ಎಂದು ಡೆನ್ಮಾರ್ಕ್ ತಂಡದ ಡಾಕ್ಟರ್ ಖಾತರಿಪಡಿಸಿದ್ದಾರೆ.
ಜೂನ್ 12ರ ಶನಿವಾರ ನಡೆಯುತ್ತಿದ್ದ ಯೂನಿಯನ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಎಎಫ್‍ಸಿಎ) ಯೂರೋ 2020 ಡೆನ್ಮಾರ್ಕ್-ಫಿನ್‍ಲ್ಯಾಂಡ್ ಪಂದ್ಯದ ವೇಳೆ ಈ ಘಟನೆ ಸಂಭವಿಸಿತ್ತು. ಮಿಡ್‍ಫೀಲ್ಡರ್ ಕ್ರಿಶ್ಚಿಯನ್ ಎರಿಕ್ಸನ್ ಅಸ್ವಸ್ಥರಾಗಿದ್ದರಿಂದ ಶನಿವಾರದ ಪಂದ್ಯವನ್ನು ಅಮಾನತುಗೊಳಿಸಲಾಗಿತ್ತು. ‘ಅವರು ಪ್ರಜ್ಞೆ ತಪ್ಪಿದ್ದರು, ಬಹುತೇಕ ಸತ್ತೇ ಹೋಗಿದ್ದರು. ನಾವು ಹೃದಯಾಘಾತಕ್ಕೆ ಚಿಕಿತ್ಸೆ ನೀಡಿದೆವು. ಯಾಕೆಂದರೆ ಅದು ಹೃದಯಾಘಾತವಾಗಿತ್ತು. ಒಂದು ಡಿಫಿಬ್ (ಡಿಫಿಬ್ರಿಲೇಷನ್) ಮಾಡಿದ ನಂತರ ನಾವು ಅವರನ್ನು ಮತ್ತೆ ಬದುಕಿಸಿದೆವು,’ ಎಂದು ಮಾರ್ಟನ್ ಬೋಯೆಸೆನ್ ಸುದ್ದಿಗೋಷ್ಠಿ ವೇಳೆ ಹೇಳಿದ್ದಾರೆ.ಶನಿವಾರ ಎರಿಕ್ಸನ್ ಕುಸಿದು ಬಿದ್ದಿದ್ದಕ್ಕೆ ಸಂಬಂಧಿಸಿ ಎರಿಕ್ಸನ್‍ಗೆ ಇನ್ನಷ್ಟು ಚಿಕಿತ್ಸೆ ನೀಡಲಿರುವುದರಿಂದ ಅವರು ಇನ್ನೂ ಸ್ವಲ್ಪ ದಿನ ಆಸ್ಪತ್ರೆಯಲ್ಲಿರಲಿದ್ದಾರೆ ಎಂದು ಬೋಯೆಸೆನ್ ತಿಳಿಸಿದ್ದಾರೆ.