ನಟನೆ ಸಂಚಾರಿ ವಿಜಯರ ಮೊದಲ ಆಯ್ಕೆಯಾಗಿರಲಿಲ್ಲ

0
296

ಮೂಲತಃ ರಂಗಭೂಮಿ ಕಲಾವಿದನಾಗಿದ್ದ ಸಂಚಾರಿ ನಂತರ ಸಿನಿಮಾಗಳಲ್ಲಿ ನಟಿಸಿದರು. ‘ನಾನು ಅವನಲ್ಲ ಅವಳು’ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಸಿಕ್ಕ ಮೇಲೆ ವಿಜಯ್ ಹೆಸರು ಕನ್ನಡ ಇಂಡಸ್ಟ್ರಿಯಲ್ಲಿ ದೊಡ್ಡದಾಗಿ ಬೆಳೆಯಿತು. ಅದಾದ ಮೇಲೆ ಸಂಚಾರಿ ಜೀವನ ಸಿನಿಮಾದೊಂದಿಗೆ ಬೆರತು ಹೋಗಿದೆ.

ತಂದೆ ಬಸವರಾಜ್ ಚಿತ್ರ ಕಲಾವಿದರು, ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು. ತಾಯಿ ಗೌರಮ್ಮ ವೃತ್ತಿಯಲ್ಲಿ ನರ್ಸ್ ಆಗಿದ್ದು ಜಾನಪದ ಕಲಾವಿದೆಯೂ ಆಗಿದ್ದರು. ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದ್ದರು.ಬಹಳಷ್ಟು ಜನಕ್ಕೆ ತಿಳಿದೇ ಇರುವ ಸಂಗತಿ ಏನಪ್ಪಾ ಅಂದ್ರೆ ಸಂಚಾರಿ ವಿಜಯ್ ನಟನಾಗುತ್ತೇನೆ ಎಂದುಕೊಂಡಿರಲಿಲ್ಲ. ಹೋಟೆಲ್, ಬೇಕರಿ ಆಮೇಲೆ ಬಾರ್‍ನಲ್ಲಿ ಕೆಲಸ ಮಾಡ್ಕೊಂಡು ಜೀವನ ಕಂಡುಕೊಂಡಿದ್ದರು. ಹಾಗಾದ್ರೆ, ನಟನೆಗೂ ಮುಂಚೆ ವಿಜಯ್ ಏನ್ ಮಾಡ್ತಿದ್ರು? ಮುಂದೆ ಓದಿ…

ಉಪನ್ಯಾಸಕ ಆಗಿದ್ದರು
ಹೋಟೆಲ್, ಬೇಕರಿ ಆಮೇಲೆ ಬಾರ್‍ನಲ್ಲಿ ಕೆಲಸ ಮಾಡ್ತಿದ್ದ ಸಂಚಾರಿ ವಿಜಯ್ ಕಾಲೇಜ್‍ವೊಂದರಲ್ಲಿ ಉಪನ್ಯಾಸಕನಾಗಿಯೂ ಕಾರ್ಯನಿರ್ವಹಿಸಿದ್ದರು. ಆ ಸಂದರ್ಭದಲ್ಲಿ ರಂಗಭೂಮಿ ನಂಟು ಬೆಳೆಯಿತು. ಹವ್ಯಾಸಿ ತಂಡಗಳ ಜೊತೆ ಕೈ ಜೋಡಿಸಿದ ವಿಜಯ್ ನಾಟಕಗಳಲ್ಲಿ ನಟಿಸಲು ಶುರು ಮಾಡಿದರು. ಆಮೇಲೆ ಸಂಚಾರಿ ತಂಡ ಸೇರಿದರು.

ಎರಡು ನಾಟಕ ನಿರ್ದೇಶಿಸಿದ್ದರು
ಸಂಚಾರಿ ತಂಡದಲ್ಲಿ ಸುಮಾರು ಹತ್ತು ವರ್ಷದಿಂದ ಕೆಲಸ ಮಾಡ್ತಿದ್ದಾರೆ. ಇಪತ್ತಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದರು. ಎರಡು ನಾಟಕ ನಿರ್ದೇಶಿಸಿದ್ದರು. ಸಿನಿಮಾಗೆ ಬಂದಮೇಲೆ ರಂಗಭೂಮಿ ಗೀಳು ಕಮ್ಮಿಯಾಗಿಲ್ಲ. ನಟಿಸುವುದಕ್ಕೆ ಸಾಧ್ಯವಾಗದೇ ಹೋದರು, ವೇದಿಕೆ ಹಿಂದೆ ಕೆಲಸ ಮಾಡ್ತಿದ್ದರು.

ಗಾಯಕ ಆಗ್ಬೇಕು ಅಂತ ಹೊರಟರು
ಸಂಗೀತದಲ್ಲಿ ಒಲವು ಮೂಡಿಸಿಕೊಂಡ ವಿಜಯ್ ಗಾಯಕನಾಗಿ ವೃತ್ತಿ ರೂಪಿಸಿಕೊಳ್ಳಲು ಚಿಂತಿಸಿ ಪ್ರಯತ್ನಿಸಿದ್ದರು. ಆದರೆ, ಆ ಪ್ರಯತ್ನ ಕೈ ಹಿಡಿಯಲಿಲ್ಲ. ನಟನೆ ಕಡೆ ಗಮನ ಕೊಡು ಅಂತ ಆಪ್ತರು ಸಲಹೆ ಕೊಟ್ಟರು. ಹೀಗೆ, ನಟನೆ ಮೇಲೆ ಅವಲಂಬಿತರಾದೆ ಎಂದು ಸ್ವತಃ ಸಂಚಾರಿ ವಿಜಯ್ ಹೇಳಿಕೊಂಡಿದ್ದರು.

ನಿರ್ದೇಶನ ಮಾಡುವ ಆಸೆ
ನಟನೆಗೂ ಮುಂಚೆ ಡೈರೆಕ್ಷನ್ ವಿಭಾಗದಲ್ಲಿ ಕೆಲಸ ಮಾಡ್ತಿದ್ದರು. ಈ ಸಮಯದಲ್ಲಿ ಹಲವು ಕಥೆಗಳನ್ನು ಸಿದ್ದ ಮಾಡಿಕೊಂಡಿದ್ದರು. ನಾನು ಅವನಲ್ಲ ಅವಳು ಚಿತ್ರಕ್ಕೆ ಪ್ರಶಸ್ತಿ ಬಂದ ಮೇಲೆ ನಿರ್ದೇಶನದ ಕಡೆ ಸಮಯ ಕೊಡಲು ಸಾಧ್ಯವಾಗಲಿಲ್ಲ. ಮುಂದಿನ ದಿನದಲ್ಲಿ ನಿರ್ದೇಶನ ಮಾಡಬೇಕೆಂಬ ಆಸೆ ಎಂದು ವಿಜಯ್ ತಿಳಿಸಿದ್ದರು. ನಿರ್ದೇಶಕನಾದರೆ ಸಮಾಜಕ್ಕೆ ಏನಾದರೂ ಒಳಿತು ಮಾಡಬೇಕು, ಅದು ಜಾಗತಿಕ ಚಿತ್ರ ಆಗಬೇಕು ಎಂಬ ಹುಚ್ಚು ಆಸೆ ಇದೆ ಎಂದಿದ್ದರು.

ಪರಿಶ್ರಮದಿಂದ ಯಶಸ್ಸು
‘ಇಂಡಸ್ಟ್ರಿಗೆ ಬಂದಾಗ ಯಾರ ಸಹಾಯವೂ ಇರಲಿಲ್ಲ. ಛಲ, ಹಠ, ಹಾರ್ಡ್‍ವರ್ಕ್ ಪರಿಣಾಮ ನಾನು ಇಲ್ಲಿಗೆ ಬಂದಿದ್ದೇನೆ. ಹೋರಾಟ ಮಾಡಿ, ಹೊಡೆದಾಡಿ ಬಂದಿದ್ದು ಈ ಯಶಸ್ಸು ಕಂಡಿದ್ದೇನೆ’ ಎಂದು ಸಂಚಾರಿ ವಿಜಯ್ ಫೇಸ್‍ಬುಕ್ ಲೈವ್‍ನಲ್ಲಿ ಹೇಳಿದ್ದರು.

Previous articleಮೆಣಸಿನಕಾಯಿ ಬೀಜಕ್ಕಾಗಿ ಪಟ್ಟು ಹಿಡಿದ ರೈತ ಮಹಿಳೆಯರು
Next article‘ತಲೆದಂಡ’ ಟ್ರೇಲರ್ ಬಿಡುಗಡೆ ಸಂಚಾರಿ ವಿಜಯ್ ನಟನಾ ಪ್ರತಿಭೆಗೆ ಮತ್ತೊಂದು ಸಾಕ್ಷಿ

LEAVE A REPLY

Please enter your comment!
Please enter your name here