ಸಂಚಾರಿ ವಿಜಯ್ ನಿಧನ ಹೊಂದಿದ್ದಾರೆ. ಅವರು ಭೌತಿಕವಾಗಿ ನಮ್ಮನ್ನು ಅಗಲಿದ್ದರೂ ಸಿನಿಮಾಗಳ ಮೂಲಕ, ಅದ್ಭುತ ನಟನೆ ಮೂಲಕ ಸಿನಿಪ್ರೇಮಿಗಳ ಮನದಲ್ಲಿ ಸದಾ ಜೀವಂತವಿರಲಿದ್ದಾರೆ. ಸಂಚಾರಿ ವಿಜಯ್ ನಟನೆಯ ‘ತಲೆದಂಡ’ ಸಿನಿಮಾದ ಟ್ರೇಲರ್ ಅನ್ನು ಚಿತ್ರತಂಡ ಇದೀಗ ಬಿಡುಗಡೆ ಮಾಡಿದೆ. ಟ್ರೇಲರ್‍ನಲ್ಲಿ ವಿಜಯ್ ನಟನೆ ನೋಡಿದರೆ ಇಂಥಹಾ ಅದ್ಭುತ ನಟ ಅಕಾಲಿಕವಾಗಿ ಅಗಲಿ ಹೋಗಿಬಿಟ್ಟರಲ್ಲ ಎಂದು ಕರುಳು ಕಿವುಚಿದಂತಾಗುವುದು ಖಾತ್ರಿ.
‘ತಲೆದಂಡ’ ಸಿನಿಮಾದಲ್ಲಿ ಬುದ್ಧಿಮಾಂದ್ಯನ ಪಾತ್ರದಲ್ಲಿ ಸಂಚಾರಿ ವಿಜಯ್ ನಟಿಸಿದ್ದಾರೆ. ಬುದ್ದಿಮಾಂದ್ಯನಾದರೂ ‘ಬುದ್ಧಿವಂತರು’ ಮಾಡುವ ಅನ್ಯಾಯದ ವಿರುದ್ಧ ಹೋರಾಡುವ ಕಥಾವಸ್ತುವನ್ನು ‘ತಲೆದಂಡ’ ಸಿನಿಮಾ ಹೊಂದಿದೆ. ಟ್ರೇಲರ್‍ನಲ್ಲಿ ವಿಜಯ್ ನಟನೆ ಕಂಡು ಕಣ್ಣು ತುಂಬಿ ಬರುತ್ತದೆ. ನಟನೆಗೆ ಈಗಾಗಲೇ ಒಂದು ರಾಷ್ಟ್ರಪ್ರಶಸ್ತಿ ಪಡೆದಿರುವ ವಿಜಯ್‍ಗೆ ‘ತಲೆದಂಡ’ ಸಿನಿಮಾಕ್ಕೆ ಮತ್ತೊಂದು ರಾಷ್ಟ್ರಪ್ರಶಸ್ತಿ ದೊರಕುವ ಸಂಭವ ದಟ್ಟವಾಗಿದೆ ಎಂಬುದು ಟ್ರೇಲರ್ ನೋಡಿದರೆ ಗೊತ್ತಾಗುತ್ತಿದೆ.
‘ತಲೆದಂಡ’ ಸಿನಿಮಾವು ಪರಿಸರ ಮತ್ತು ಮಾನವನ ನಡುವಿನ ಸಂಬಧ. ಪರಿಸರದ ಮೇಲೆ ಮಾನವನ ಅತಿಕ್ರಮಣ ಇತ್ಯಾದಿ ಸಾಮಾಜಿಕ ಕಳಕಳಿಯ ವಿಷಯಗಳನ್ನು ಇರಿಸಿಕೊಂಡು ನಿರ್ಮಿಸಲಾಗಿರುವ ಸಿನಿಮಾ ಆಗಿದೆ. ‘ತಲೆದಂಡ’ ಸಿನಿಮಾದ ಬಗ್ಗೆ ಸಂಚಾರಿ ವಿಜಯ್ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ‘ತಲೆದಂಡ’ ಸಿನಿಮಾ ಬಿಡುಗಡೆ ಆಗಿಲ್ಲ. ಚಿತ್ರಮಂದಿರಗಳು ತೆರೆದ ಬಳಿಕ ಸಿನಿಮಾ ಬಿಡುಗಡೆ ಆಗುವ ಸಂಭವ ಇದೆ.