ನಟಿ, ಸಂಸದೆ ಸುಮಲತಾ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡುವಿನ ಜಟಾಪಟಿಗೆ ಇನ್ನು ಬ್ರೇಕ್ ಬಿದ್ದಿಲ್ಲ. ಡ್ಯಾಮ್ ಮತ್ತು ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿರುವ ಸುಮಲತಾ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಿಡಿದೆದ್ದಿದ್ದಾರೆ. ಇಬ್ಬರ ನಡುವಿನ ವಾಗ್ವಾದ ಬೇರೆ ಬೇರೆ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.
ಇಬ್ಬರ ನಡುವಿನ ರಾಜಕೀಯ ಗುದ್ದಾಟ ಈಗ ಅಂಬರೀಶ್ ಮತ್ತು ಕುಮಾರಸ್ವಾಮಿ ಅಭಿಮಾನಿಗಳ ನಡುವಿನ ಕಿತ್ತಾಟಕ್ಕೆ ಕಾರಣವಾಗಿದೆ. ಈಗಾಗಲೇ ಈ ಬಗ್ಗೆ ಅನೇಕ ರಾಜಕೀಯ ವ್ಯಕ್ತಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ನಟಿ, ಮಾಜಿ ಸಚಿವೆ ಉಮಾಶ್ರೀ ಮಾತನಾಡಿ ಕುಮಾರಸ್ವಾಮಿ ಹೀಗೆ ಹೀಯಾಳಿಸಿ ಮಾತನಾಡುವುದು ಸರಿಯಲ್ಲ ಎಂದು ಹೇಳುವ ಮೂಲಕ ಸುಮಲತಾ ಪರ ಬ್ಯಾಟ್ ಬೀಸಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಮಾಜಿ ಸಚಿವೆ ಉಮಾಶ್ರೀ, “ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈ ರೀತಿ ಹಿಯಾಳಿಸಿ ಮಾತನಾಡುವುದ, ಬೇರೆ ರೀತಿಯಲ್ಲಿ ಬಿಂಬಿಸುವುದು ಸರಿಯಲ್ಲ. ಮಹಿಳೆ ಎನ್ನುವುದನ್ನು ಪಕ್ಕಕ್ಕೆ ಇಡಿ. ಅವರ ಹೇಳಿಕೆಗಳನ್ನು ಸರ್ಕಾರ ಗಮನಿಸುತ್ತೆ. ಕನ್ನಂಬಾಡಿ ಕಟ್ಟೆಗೆ ಏನಾದರು ಆಗುತ್ತೋ ಎನ್ನುವ ಆತಂಕ ಇರಬಹುದೇನು. ಜನಗಳೇ ಬಂದು ಬೇಡಿಕೆ ಸಲ್ಲಿಸಿರಬಹುದು” ಎಂದು ಸುಮಲತಾ ಪರ ಮಾತನಾಡಿದ್ದಾರೆ.
“ಸರ್ಕಾರ ಇದರ ಕಡೆ ಗಮನ ಹರಿಸಬೇಕು. ಅದಕ್ಕೆ ಕಮಿಟಿ ಮಾಡಿ ವರದಿ ತರಿಸಿಕೊಳ್ಳಬೇಕು. ಆ ಕಡೆ ಗಮನ ಹರಿಸುವುದು ಸರ್ಕಾರದ ಕೆಲಸ. ಮಾಜಿ ಮುಖ್ಯಮಂತ್ರಿಗಳು ಇದನ್ನು ಪರಿಶೀಲನೆ ಮಾಡಿ ಅಂತ ಸರ್ಕಾರಕ್ಕೆ ಹೇಳುವ ಕೆಲಸ ಮಾಡಬೇಕು. ಅದು ಬಿಟ್ಟು ಈ ರೀತಿ ನಡೆದುಕೊಳ್ಳುವುದು ಅಂತ ಘನತೆವೆತ್ತ ವ್ಯಕ್ತಿಗೆ ಶೋಭೆ ತರುವುದಿಲ್ಲ” ಎಂದಿದ್ದಾರೆ.