ಟೀಮ್ ಇಂಡಿಯಾ ಮುಖ್ಯ ಕೊಚ್ ಆಗಿ ರಾಹುಲ್ ದ್ರಾವಿಡ್ ಇತ್ತೀಚೆಗಷ್ಟೇ ಆಯ್ಕೆಯಾಗಿದ್ದು ಇದೀಗ ತಮ್ಮ ಮೊದಲ ಜವಾಬ್ಧಾರಿ ನಿರ್ವಹಿಸಲು ಸಜ್ಜಾಗಿದ್ದಾರೆ. ಮುಖ್ಯ ಕೊಚ್ ಆಗಿ ಆಯ್ಕೆಯಾಗಿರುವ ರಾಹುಲ್ ದ್ರಾವಿಡ್ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಸಜ್ಜಾಗಿದ್ದು ಜೈಪುರಕ್ಕೆ ಬಂದಿಳಿದಿದ್ದಾರೆ. ಇದೇ ತಿಂಗಳ 17ನೇ ತಾರೀಕಿನಿಂದ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಟೀಮ್ ಇಂಡಿಯಾದ ಕೋಚ್ ಆಗಿದ್ದ ರವಿ ಶಾಸ್ತ್ರಿ ಅವಧಿ ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತದ ಅಭಿಯಾನ ಅಂತ್ಯವಾಗುತ್ತಿದ್ದಂತೆಯೆ ಕೊನೆಯಾಯಿತು. ಹೀಗಾಗಿ ಬಿಸಿಸಿಐ ರಾಹುಲ್ ದ್ರಾವಿಡ್ ಅವರನ್ನು ಮುಂದಿನ ಅವಧಿಗೆ ಮುಖ್ಯ ಕೋಚ್ ಆಗಿ ನಿಯೋಜಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ಎರಡು ವಿಶ್ವಕಪ್‌ಗಳು ಕೂಡ ನಡೆಯಲಿರುವ ಕಾರಣದಿಂದಾಗಿ ರಾಃಉಲ್ ದ್ರಾವಿಡ್ ಮುಂದೆ ಈಗ ಮಹತ್ವದ ಸವಾಲಿದೆ.
ಇನ್ನು ಮುಖ್ಯ ಕೋಚ್ ಆಗಿ ಜೈಪುರಕ್ಕೆ ಬಂದಿಳಿದಿರುವ ರಾಹುಲ್ ದ್ರಾವಿಡ್‌ಗೆ ಸದ್ಯ ಯಾವುದೇ ಸಹಾಯಕ ಸಿಬ್ಬಂದಿಯನ್ನು ನಿಯೋಜನೆ ಮಾಡಿಲ್ಲ. ಹೊಸ ಬೌಲಿಂಗ್ ಕೋಚ್ ಹಾಗೂ ಫಿಲ್ಡಿಂಗ್ ಕೋಚ್ ಇನ್ನಷ್ಟೇ ಘೋಷಣೆಯಾಗಬೇಕಿದೆ. ಶೀಘ್ರದಲ್ಲಿಯೇ ಬಿಸಿಸಿಐ ಈ ಸ್ಥಾನಕ್ಕೆ ನಿಯೋಜನೆ ಮಾಡಲಿದ್ದು ನ್ಯೂಜಿಲೆಂಡ್ ವಿರುದ್ಧದ ಸರಣಿ ಆರಂಭವಾಗುವ ಮುನ್ನ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ. ಇನ್‌ಸೈಡ್ ಸ್ಪೋರ್ಟ್ ವರದಿಯ ಪ್ರಕಾರ ಹೊಸ ಬೌಲಿಂಗ್ ಮತ್ತು ಫೀಲ್ಡಿಂಗ್ ತರಬೇತುದಾರರನ್ನು ಬಿಸಿಸಿಐ ಆಯ್ಕೆ ಮಾಡಿದ್ದು ನವೆಂಬರ್ 13 ರಂದು ರಾಹುಲ್ ದ್ರಾವಿಡ್ ಜೊತೆಗೆ ಸೇರಿಕೊಳ್ಳುವ ಸಾಧ್ಯತೆಯಿದೆ ಎಂದಿದೆ. ಜೈಪುರದಲ್ಲಿ ಮೂರು ದಿನಗಳ ಕ್ವಾರಂಟೈನ್ ಮುಗಿಸಿದ ನಂತರ ತಂಡದ ಅಭ್ಯಾಸದಲ್ಲಿ ದ್ರಾವಿಡ್‌ಗೆ ಸಾಥ್ ನೀಡಲಿದ್ದಾರೆ ಎನ್ನಲಾಗಿದೆ. ಪರಾಸ್ ಮಾಂಬ್ರೆ ಮತ್ತು ಟಿ ದಿಲೀಪ್ ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ಬಿಸಿಸಿಐ ಈ ಹೆಸರುಗಳನ್ನು ಪ್ರಕಟಿಸದರಲು ಕಾರಣವಿದೆ ಎಂದು ಈ ವರದಿ ಹೇಳುತ್ತಿದೆ.
ಇನ್‌ಸೈಡ್ ಸ್ಪೋರ್ಟ್ ವರದಿಯ ಪ್ರಕಾರ ರಾಹುಲ್ ದ್ರಾವಿಡ್ ದೀರ್ಘ ಕಾಲದ ದೃಷ್ಟಿಯಲ್ಲಿಟ್ಟುಕೊಂಡು ಅಭಯ್ ಶರ್ಮಾ ಅವರನ್ನು ಫೀಲ್ಡಿಂಗ್ ಕೋಚ್ ಆಗಿ ನೇಮಿಸಿಕೊಳ್ಳಲು ಬಯಸಿದ್ದಾರೆ ಎಂದು ವರದಿಯಾಗಿದೆ. ಆದರೆ ಬಿಸಿಸಿಐ ಪದಾಧಿಕಾರಿಗಳು ಹಾಗೂ ಸಿಎಸಿ ಅಭಯ್ ಶರ್ಮಾ ಎನ್‌ಸಿಎನಲ್ಲಿಯೇ ಮುಂದಿವರಿಯಲು ಇಚ್ಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ವಿಚಾರದಲ್ಲಿನ ಗೊಂದಲ ಬಗೆಹರಿದ ನಂತರವೇ ಫಿಲ್ಡಿಂಗ್ ಕೋಚ್ ಹಾಗೂ ಬೌಲಿಂಗ್ ಕೋಚ್ ಘೋಷಣೆಯಾಗಲಿದೆ.