ಟೋಕಿಯೊ ಒಲಿಂಪಿಕ್ಸ್ 2020 ಆಗಸ್ಟ್ 8ರ ಭಾನುವಾರದಂದು ಯಶಸ್ವಿಯಾಗಿ ಕೊನೆಗೊಂಡಿತು. ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ 39 ಚಿನ್ನದ ಪದಕಗಳು ಸೇರಿದಂತೆ ಒಟ್ಟು 113 ಪದಕಗಳನ್ನು ಗೆಲ್ಲುವುದರ ಮೂಲಕ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕ ಅತಿಹೆಚ್ಚು ಪದಕಗಳನ್ನು ಗೆದ್ದ ತಂಡವಾಗಿ ಹೊರಹೊಮ್ಮಿದೆ. ಇನ್ನು ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ 7 ಪದಕಗಳನ್ನು ತನ್ನದಾಗಿಸಿಕೊಂಡ ಭಾರತ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ 7 ಪದಕಗಳನ್ನು ಗೆದ್ದು ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಕೊನೆಯ ಹಂತದವರೆಗೂ ಯಾವುದೇ ಚಿನ್ನದ ಪದಕವನ್ನು ಗೆಲ್ಲದೆ ಈ ಬಾರಿಯೂ ನಿರಾಸೆ ಮೂಡಿಸಿದ್ದ ಭಾರತದ ಪರ ನೀರಜ್ ಚೋಪ್ರಾ ಜಾವೆಲಿನ್ ಥ್ರೋ ಪುರುಷರ ವಿಭಾಗದ ಫೈನಲ್ ಸುತ್ತಿನಲ್ಲಿ ಗೆಲ್ಲುವುದರ ಮೂಲಕ ಚಿನ್ನದ ಪದಕವನ್ನು ತಂದು ಕೊಟ್ಟರು.
ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೊದಲು ಪದಕವನ್ನು ಗೆದ್ದು ಕೊಟ್ಟಿದ್ದು ಮೀರಾಬಾಯಿ ಚಾನು. ಜುಲೈ 24ರಂದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನಡೆದಿದ್ದ 49ಕೆಜಿ ವಿಭಾಗದ ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಬೆಳ್ಳಿಯ ಪದಕ ಗೆದ್ದಿದ್ದರು. ಹೀಗೆ ಬೆಳ್ಳಿ ಪದಕ ಗೆಲ್ಲುವುದರ ಮೂಲಕ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚೊಚ್ಚಲ ಪದಕವನ್ನು ಗೆದ್ದುಕೊಟ್ಟ ಮೀರಾಬಾಯಿ ಚಾನುಗೆ ದೇಶದಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು. ಹಲವಾರು ರಾಜಕಾರಣಿಗಳು, ಸಿನಿಮಾ ಕಲಾವಿದರು ಮತ್ತು ಕ್ರಿಕೆಟಿಗರು ಮೀರಾಬಾಯಿ ಚಾನು ಮಾಡಿದ ಸಾಧನೆಯನ್ನು ಮೆಚ್ಚಿ ಶುಭ ಹಾರೈಸಿದರು. ಹೀಗೆ ಸಚಿನ್ ತೆಂಡೂಲ್ಕರ್ ಕೂಡ ಮಿರಾಬಾಯಿ ಚಾನು ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಮಾಡಿದ ಸಾಧನೆಯನ್ನು ಹೊಗಳಿ ಈ ಹಿಂದೆ ಟ್ವೀಟ್ ಮಾಡಿದ್ದರು. ಇದೀಗ ಖುದ್ದಾಗಿ ಮೀರಾಬಾಯಿ ಚಾನು ಮತ್ತು ಸಚಿನ್ ತೆಂಡೂಲ್ಕರ್ ಭೇಟಿಯಾಗಿದ್ದು, ಇಬ್ಬರ ಭೇಟಿಯ ಫೋಟೋಗಳನ್ನು ಮೀರಾಬಾಯಿ ಚಾನು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಬುಧವಾರ (ಆಗಸ್ಟ್ 11 ) ಬೆಳಿಗ್ಗೆ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾದ ಮೀರಾಬಾಯಿ ಚಾನು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ತಾವು ಗೆದ್ದ ಬೆಳ್ಳಿಯ ಪದಕವನ್ನು ತೋರಿಸಿ ಸಂತಸಪಟ್ಟಿದ್ದಾರೆ.
ಇನ್ನು ಮೀರಾಬಾಯಿ ಚಾನು ಅವರನ್ನು ಭೇಟಿ ಮಾಡಿದ ಸಚಿನ್ ತೆಂಡೂಲ್ಕರ್ ಸ್ಫೂರ್ತಿದಾಯಕ ಮಾತುಗಳನ್ನಾಡಿದ್ದಾರೆ. ಹೀಗೆ ಸಚಿನ್ ತೆಂಡೂಲ್ಕರ್ ಅವರ ಜೊತೆಗಿನ ಭೇಟಿಯ ಕುರಿತು ಚಿತ್ರವನ್ನು ಹಂಚಿಕೊಳ್ಳುವುದರ ಮೂಲಕ ಮೀರಾಬಾಯಿ ಚಾನು ಸಚಿನ್ ತೆಂಡೂಲ್ಕರ್ ತಮಗೆ ನೀಡಿದ ಸಲಹೆ ಕುರಿತು ಬರೆದುಕೊಂಡಿದ್ದಾರೆ. ‘ಇಂದು ಬೆಳಿಗ್ಗೆ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾದೆ. ಅವರ ಜ್ಞಾನದ ಮಾತುಗಳು ಮತ್ತು ಅವರು ನೀಡಿದ ಪ್ರೇರಣೆಗಳು ಎಂದಿಗೂ ನನ್ನ ಜೊತೆ ಇರುತ್ತವೆ. ನಿಜವಾಗಿಯೂ ಅವರಿಂದ ಸ್ಫೂರ್ತಿ ಪಡೆದೆ’ ಎಂದು ಮೀರಾಬಾಯಿ ಚಾನು ಟ್ವೀಟ್ ಮಾಡಿದ್ದಾರೆ. ಇನ್ನು ಮಿರಾಬಾಯಿ ಚಾನು ಮಾಡಿರುವ ಟ್ವೀಟ್ ಬಗ್ಗೆ ಸಾಕಷ್ಟು ಕಾಮೆಂಟ್ಸ್ ಕೂಡಾ ಬಂದಿದ್ದು ಸಚಿನ್ ಮತ್ತು ಮೀರಾಬಾಯಿ ಚಾನು ಭೇಟಿಯ ಬಗ್ಗೆ ಕೆಲವರು ಸಂತಸ ವ್ಯಕ್ತಪಡಿಸುತ್ತಿದ್ದರೆ ಇನ್ನೂ ಕೆಲ ಮಂದಿ ನೀವು ಕ್ರಿಕೆಟಿಗರಿಂದ ಸ್ಫೂರ್ತಿಯನ್ನು ಪಡೆಯಬೇಡಿ, ನಿಮ್ಮಂತ ಕ್ರೀಡಾಪಟುಗಳನ್ನು ನೋಡಿ ಕ್ರಿಕೆಟಿಗರು ಸ್ಫೂರ್ತಿಯನ್ನು ನಿಮ್ಮಿಂದ ಪಡೆಯಬೇಕು ಎಂದು ಪ್ರತ್ಯುತ್ತರ ನೀಡಿದ್ದಾರೆ. ಪದಕ ಗೆದ್ದ ಭಾರತೀಯರು ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಹಿಂದೆಂದೂ ತಲುಪದ ಹಂತವನ್ನು ಭಾರತ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ಮೂಲಕ ತಲುಪಿದ್ದು ಇದೇ ಮೊದಲ ಬಾರಿಗೆ 7 ಪದಕಗಳನ್ನು ತನ್ನದಾಗಿಸಿಕೊಂಡು ಹೊಸ ಮೈಲಿಗಲ್ಲನ್ನು ನೆಟ್ಟಿದೆ. ಭಾರತದ ಪರ ಜಾವೆಲಿನ್ ಥ್ರೋ ಪುರುಷರ ವಿಭಾಗದಲ್ಲಿ ನೀರಜ್ ಚೋಪ್ರಾ ಚಿನ್ನ , ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ, ಪುರುಷರ ಫ್ರೀಸ್ಟೈಲ್ ಕುಸ್ತಿಯಲ್ಲಿ ರವಿ ದಾಹಿಯಾ ಬೆಳ್ಳಿ, ಭಾರತದ ಪುರುಷರ ಹಾಕಿ ತಂಡ ಕಂಚು, ಮಹಿಳಾ ವೆಲ್ಟರ್ ವೇಟ್ ಬಾಕ್ಸಿಂಗ್ ವಿಭಾಗದಲ್ಲಿ ಲವ್ಲಿನಾ ಬೋರ್ಗೊಹೈನ್ ಕಂಚು, ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಪಿವಿ ಸಿಂಧೂ ಕಂಚು ಮತ್ತು ಪುರುಷರ ಫ್ರೀಸ್ಟೈಲ್ ಕುಸ್ತಿಯಲ್ಲಿ ಭಜರಂಗ್ ಪೂನಿಯಾ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.