ಈ ಮೊದಲು ಸಾಮಾಜಿಕ ಸಂದೇಶ ವೊಂದಿರುವ ‘ಮಂತ್ರಂ’ ಸಿನಿಮಾ ನಿರ್ದೇಶನ ಮಾಡಿದ್ದ, ಸಂಗಮೇಶ ಎಸ್ ಸಜ್ಜನ್ ಇದೀಗ ಎರಡನೇ ಚಿತ್ರವಾಗಿ ‘ಮೃತ್ಯುಂಜಯ’ಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಕಳೆದ ವರ್ಷ ಕೊರೋನಾ ಲಾಕ್‍ಡೌನ್ ನಂತರ ಶುರುವಾದ ಈ ಸಿನಿಮಾ ಈಗಾಗಲೇ ಸೆನ್ಸಾರ್‍ನಿಂದ ಯು/ಎ ಪ್ರಮಾಣ ಪತ್ರ ಪಡೆದು ರಿಲೀಸ್‍ಗೆ ಸಿದ್ದವಾಗಿದೆ. ಅದರ ಪ್ರಯುಕ್ತ ಇತ್ತೀಚೆಗೆ ಚಿತ್ರದ ಟೀಸರ್‍ವೊಂದನ್ನು ರಿಲೀಸ್ ಮಾಡಲಾಯಿತು. ಈ ಟೀಸರ್ ಬಿಡುಗಡೆ ಮಾಡಿದವರು ನಟ ಯಶಸ್ ಸೂರ್ಯ. ಒಂದೇ ಹಂತದಲ್ಲಿ ಸತತವಾಗಿ 8 ದಿನ ಅಂದರೆ 192 ಗಂಟೆಗಳ ಕಾಲ ಚಿತ್ರೀಕರಣ ಮಾಡಿ ನಿರ್ದೇಶಕರು ರೆಕಾರ್ಡ ಮಾಡಿದ್ದಾರೆ. ಜೊತಗೆ ಕ್ಲೈಮಾಕ್ಸ್‍ನಲ್ಲಿ 800 ಜನರೊಂದಿಗೆ ಕೊರೋನಾ ಅವಧಿಯಲ್ಲಿ ಸರ್ಕಾರದ ಮಾರ್ಗಸೂಚಿ ಅನುಸರಿಸಿ ಶೂಟ್ ಮಾಡಿರುವುದು ವಿಶೇಷ.
ಈ ಚಿತ್ರವನ್ನು ಎಸ್.ಪಿ ಪಿಕ್ಚರ್ಸ್ ಬ್ಯಾನರ್‍ನಡಿ ಶೈಲಜಾ ಪ್ರಕಾಶ್ ನಿರ್ಮಾಣ ಮಾಡಿದ್ದಾರೆ. ಈ ನಿರ್ಮಾಪಕರು ಮತ್ತು ನಿರ್ದೇಶಕ ಎಸ್.ಎಸ್ ಸಜ್ಜನ್ ಅವರ ಕಾಂಬಿನೇಷನ್‍ನಲ್ಲಿ ಶಾರ್ಟ್ ಫಿಲ್ಮ್‍ವೊಂದು ಸಿದ್ದವಾಗಿತ್ತು. ಅದು ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು, ಇದೀಗ ಮೃತ್ಯುಂಜಯದಲ್ಲಿ ಮತ್ತೊಮ್ಮೆ ಒಂದಾಗಿದೆ ಈ ಜೋಡಿ. ಅಲ್ಲದೆ ನಿರ್ಮಾಪಕರು ಈ ಮೊದಲು ‘ಹೈವಾನ್’ ಎಂಬ ಸಿನಿಮಾವೊಂದಕ್ಕೆ ಬಂಡವಾಳ ಹೂಡಿದ್ದರು. ಮೃತ್ಯುಂಜಯ ಒಂದು ಸಾಮಾಜಿಕ ಸಂದೇಶ ಜೊತೆಗೆ ಲವ್ ಸ್ಟೋರಿ, ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ ಎನ್ನಬಹುದು. ಇದರಲ್ಲಿ ಆತ್ಮಹತ್ಯೆ ಎಕೆ ಮಾಡಿಕೊಳ್ಳಬಾರದು ಎಂಬ ಅಂಶ ಒಳಗೊಂಡಿದೆ. ಮೃತ್ಯವನ್ನು ಜಯಿಸುವ ಅಂಶ ಒಳಗೊಂಡಿರುವ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಸುಮನ್ ನಗರ್‍ಕರ್ ಸೈಕ್ಯಾಟ್ರಿಸ್ಟ್ ಪಾತ್ರ ಮಾಡಿದ್ದಾರೆ.
ಚಿತ್ರದ ನಾಯಕನಾಗಿ ಹಿತೇಶ್ ಕಾಣಿಸಿಕೊಂಡಿದ್ದಾರೆ. ಮೂಲತಃ ಡ್ಯಾನ್ಸರ್ ಆಗಿರುವ ಹಿತೇಶ್‍ಗೆ ಇದು ನಾಯಕನಾಗಿ ಮೊದಲ ಅವಕಾಶ. ಇವರಿಗೆ ನಾಯಕಿಯಾಗಿ ಶ್ರೇಯಾ ಶೆಟ್ಟಿ ಇದ್ದಾರೆ. ಇವರಿಗೆ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ ಇದು. ಸದ್ಯ ಶ್ರೇಯಾ ಕೈನಲಲ್ಲಿ 2-3 ಚಿತ್ರಗಳಿವೆ. ಈ ಚಿತ್ರದಲ್ಲಿ ಶ್ರೇಯಾ ಸೈಕಾಲಜಿ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಆಟೋರಾಜ, ದುರ್ಗಾಪ್ರಸಾದ್, ಚೇತನ್ ದುರ್ಗ, ಮಜಾಭಾರತ ಶಿವು, ಚೈತ್ರಾ, ಪವಿತ್ರ, ಬಾಬಣ್ಣ, ಜಲಜ ಮುಂತಾದವರು ತಾರಾಗಣದಲ್ಲಿದ್ದಾರೆ. ಆನಂದ್ ರಾಜ್ ವಿಕ್ರಮ್ ಸಂಗೀತ ಸಂಯೋಜಿಸಿರುವ ಈ ಚಿತ್ರದಲ್ಲಿ ಒಂದು ಗೀತೆ ಇದೆ. ಉಳಿದಂತೆ ಚಿತ್ರಕ್ಕೆ ಹೈದರಾಬಾದ್ ಮೂಲದ ವಡ್ಡೆ ದೇವೇಂದ್ರ ರೆಡ್ಡಿ ಛಾಯಾಗ್ರಹಣ, ಸಾಯಿ ಸಂದೇಶ್ ಸಂಕಲನವಿದೆ.