ಯುವ ಪ್ರತಿಭೆ ಕಿರಣ್ ರಾಜ್ ಮೊದಲಬಾರಿ ಆ್ಯಕ್ಷನ್-ಕಟ್ ಹೇಳಿರುವ ‘೭೭೭ ಚಾರ್ಲಿ’ ಜೂನ್ ೧೦ ರಂದು ದೇಶ ಹಾಗೂ ವಿದೇಶಗಳಲ್ಲಿ ಬಿಡುಗಡೆಯಾಗುತ್ತಿದೆ. ರಕ್ಷಿತ್ ಶೆಟ್ಟಿ ನಾಯಕ ನಟರಾಗಿ ನಟಿಸುವ ಜೋತೆಗೆ ನಿರ್ಮಾಣ ಮಾಡಿರುವ ಈ ಚಿತ್ರ ಬಹು ನಿರೀಕ್ಷೆ ಹುಟ್ಟುಹಾಕಿದ್ದು, ಈಗಾಗಲೇ ನಡೆದ ಪ್ರೀಮಿಯರ್ ಶೋಗಳಲ್ಲಿ ಉತ್ತಮ ಪ್ರಶಂಸೆ ಪಡೆದಿದೆ. ಜೊತೆಗೆ ಕರ್ನಾಟಕದಲ್ಲಿಯ ಥಿಯೇಟರ್‌ನಲ್ಲಿ ಗುರುವಾರ ರಾತ್ರಿಯಿಂದಲೇ ಕೆಲವೊಂದು ಚಿತ್ರಮಂದಿರಗಳಲ್ಲಿ ಚಾರ್ಲಿ ಪ್ರದರ್ಶನವಾಗಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೆಆರ್‌ಜೆ ಫಿಲಂಸ್‌ನ ವಿತರಕ ಕಾರ್ತಿಕ್ ಗೌಡ ‘ಬೆಂಗಳುರಿನಲ್ಲಿ ೧೫೦ ಸೇರಿದಂತೆ ರಾಜ್ಯಾದ್ಯಂತ ೩೦೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ೭೭೭ ಚಾರ್ಲಿ ಚಿತ್ರವನ್ನು ರಿಲೀಸ್ ಮಾಡುತ್ತಿz್ದೆÃವೆ. ಇದೇ ಮೊದಲ ಬಾರಿಗೆ ಜೂನ್ ೯ ರಂದು (ಗುರುವಾರ) ರಾತ್ರಿಯೇ ೧೦೦ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗಾಗಿ ಪೂರ್ವಭಾವಿ ಪ್ರದರ್ಶನ ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ ೫೫ ಕಡೆ ನಡೆದರೆ, ಉಳಿದಂತೆ ಕರ್ನಾಟಕದ ವಿವಿಧ ಕಡೆ ನಡೆಯಲಿದೆ. ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ ಎರಡರಲ್ಲೂ ಪ್ರದರ್ಶನ ನಡೆಯಲಿದೆ’ ಎಂದು ಮಾಹಿತಿ ನೀಡಿದ್ದಾರೆ.
ಸಿನಿಮಾಗೆ ಸಿಗುತ್ತಿರುವ ರೆಸ್ಪಾನ್ಸ್ ಬಗ್ಗೆ ಹೇಳುವ ನಟ ಕಮ್ ನಿರ್ಮಾಪಕ ರಕ್ಷಿತ್ ಶೆಟ್ಟಿ ‘ನಮ್ಮ ಚಿತ್ರ ಇದೇ ಹತ್ತರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ದೆಹಲಿ, ಅಹಮದಾಬಾದ್, ಲಕ್ನೋ, ಕೊಲ್ಕತ್ತಾ ಸೇರಿದಂತೆ ಭಾರತದ ವಿವಿಧ ಕಡೆ ಹಾಗೂ ವಿದೇಶದ ಕೆಲವು ಕಡೆ ನಮ್ಮ ಚಿತ್ರದ ಸೆಲೆಬ್ರಿಟಿ ಶೋಗಳನ್ನು ಆಯೋಜಿಸಲಾಗಿತ್ತು. ಸಾಕಷ್ಟು ಜನ ನಮ್ಮ ಚಿತ್ರ ವೀಕ್ಷಣೆ ಮಾಡಿ, ಮೆಚ್ಚುಗೆ ಸೂಚಿಸಿದ್ದಾರೆ.
ಕೆಲವು ಪ್ರಾಣಿಪ್ರಿಯರಂತೂ ಕಣ್ಣಲ್ಲಿ ನೀರು ಹಾಕಿಕೊಂಡು ಹೊರಬಂದಿದ್ದಾರೆ. ಅವರ ಪ್ರತಿಕ್ರಿಯೆ ನೋಡಿ, ನಮಗೂ ಮನ ತುಂಬಿ ಬಂದಿದೆ. ವ್ಯಾಪಾರ ದೃಷ್ಟಿಯಿಂದ ಹೇಳುವುದಾದಾರೆ, ಬಿಡುಗಡೆಗೂ ಮುನ್ನವೇ ‘ಚಾರ್ಲಿ’ ನಮ್ಮನ್ನು ಗೆಲಿಸಿದ್ದಾಳೆ’ ಎನ್ನುವರು. ‘ನನ್ನ ತಂಡದ ಪರಿಶ್ರಮದಿಂದ ನನ್ನ ಮೊದಲ ಚಿತ್ರ ತೆರೆ ಕಾಣುತ್ತಿದೆ. ಈಗಾಗಲೇ ಚಿತ್ರ ನೋಡಿರುವವರು ಮೆಚ್ಚುಗೆ ಸೂಚಿಸಿದ್ದಾರೆ. ಒಳ್ಳೆಯ ಚಿತ್ರ ಮಾಡಿದ್ದೀನಿ ಎಂಬ ವಿಶ್ವಾಸವಿದೆ. ನೋಡಿ ಹಾರೈಸಿ’ ಎಂದು ಹೇಳುತ್ತಾರೆ ನಿರ್ದೇಶಕ ಕಿರಣ್ ರಾಜ್. ನಾಯಕಿ ಸಂಗೀತ ಶೃಂಗೇರಿ, “ಚಾರ್ಲಿ” ಟ್ರೈನರ್ ಪ್ರಮೋದ್, ಸಂಗೀತ ನಿರ್ದೇಶಕ ನೊಬಿನ್ ಪಾಲ್, ಛಾಯಾಗ್ರಾಹಕ ಅರವಿಂದ್ ಕಶ್ಯಪ್, ಬೇಬಿ ಶಾರ್ವರಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.