ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್‍ನಲ್ಲಿ ಮತ್ತೆ ಹಿಂದಿನ ಲಯಕ್ಕೆ ಮರಳಲು ಸಕಲ ರೀತಿಯಲ್ಲೂ ಸಿದ್ಧತೆಗಳನ್ನು ನಡೆಸುತ್ತಿದೆ. ಕಳೆದ ಆವೃತ್ತಿಗಿಂತ ಈ ಬಾರಿ ತಂಡದಲ್ಲಿ ಸಾಕಷ್ಟು ಹುರುಪು ಕಾಣಿಸುತ್ತಿದ್ದು ಕೆಲ ಪ್ರಮುಖ ಬದಲಾವಣೆಗಳು ಆಗಿರುವುದು ತಂಡಕ್ಕೆ ಬಲ ತಂದಿದೆ. ಹಾಗಿದ್ದರೂ ಈ ಬಾರಿಯ ಆವೃತ್ತಿಯಲ್ಲಿಯೂ ಚೆನ್ನೈ ದೊಡ್ಡ ಯಶಸ್ಸು ಸಾಧಿಸುವುದಿಲ್ಲ ಎಂದು ಗೌತಮ್ ಗಂಭೀರ್ ಊಹಿಸಿದ್ದಾರೆ. ಕಳೆದ ಬಾರಿಯ ಆವೃತ್ತಿಯಲ್ಲಿ ಸಿಎಸ್‍ಕೆ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಟೂರ್ನಿಯಿಂದ ಹೊರಬಿದ್ದಿತ್ತು. ಚೆನ್ನೈ ಆಡಿದ ಐಪಿಎಲ್‍ನಲ್ಲಿ ಮೊದಲ ಬಾರಿಗೆ ಪ್ಲೇಆಫ್ ಹಂತಕ್ಕೇರದೆ ಹೊರಬಿದ್ದು ಕಳಪೆ ಸಾಧನೆ ಮಾಡಿತ್ತು. ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಈ ಆವೃತ್ತಿಯಲ್ಲಿ ಚೆನ್ನೈ ತಂಡದ ಸ್ಥಾನವನ್ನು ಊಹಿಸಿದ್ದು ಪ್ಲೇಆಫ್ ಹಂತಕ್ಕೇರಲು ಚೆನ್ನೈ ಸಫಲವಾಗುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಗೌತಮ್ ಗಂಭೀರ್ ಅವರ ಊಹೆಯ ಪ್ರಕಾರ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ 5ನೇ ಸ್ಥಾನವನ್ನು ಪಡೆದುಕೊಳ್ಳಲಿದೆ. ಕಳೆದ ಬಾರಿಗಿಂತ ಉತ್ತಮ ಸಾಧನೆ ಮಾಡಿದರೂ ಟಾಪ್ ನಾಲ್ಕರಲ್ಲಿ ಅವಕಾಶ ಪಡೆಯದೆ ಪ್ಲೇಆಫ್‍ಗೆ ಹೋರಾಟವನ್ನು ಅಂತ್ಯಗೊಳಿಸುತ್ತದೆ ಎಂದು ಗಂಭೀರ್ ಹೇಳಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ವೆಸ್ಟ್ ಇಂಡೀಸ್‍ನ ಮಾಜಿ ಕ್ರಿಕೆಟಿಗ ಇಯಾನ್ ಬಿಷಪ್ ನಾಲ್ಕನೇ ಸ್ಥಾನವನ್ನು ಚೆನ್ನೈ ಸೂಪರ್ ಕಿಂಗ್ಸ್ ಪಡೆಯಲಿದೆ ಎಂದು ಹೇಳಿದ್ದಾರೆ. ಈ ಮೂಲಕ ಚೆನ್ನೈ ಪ್ಲೇಆಫ್ ಹಂತಕ್ಕೇರುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಆದರೆ ಭಾರತದ ಮಾಜಿ ಕ್ರಿಕೆಟಿಗರ್‍ಗಳಾದ ಸಂಜಯ್ ಮಂಜ್ರೇಕರ್ ಹಾಗೂ ಆಕಾಶ್ ಚೋಪ್ರ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಆವೃತ್ತಿಯಲ್ಲಿಯೂ ಪ್ಲೇಆಫ್ ಹಂತಕ್ಕೇರಲು ವಿಫಲವಾಗಲಿದೆ ಎಂದು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಆವೃತ್ತಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಏಪ್ರಿಲ್ 10ರಂದು ಸೆಣೆಸಾಡುವ ಮೂಲಕ ಆರಂಭಿಸಲಿದೆ.