ಕಲರ್‌ಫುಲ್ ಸೆಟ್‌ನಲ್ಲಿ ಹಾಡಿ ಕುಣಿದ ‘ತೋತಾಪುರಿ’ ತಂಡ

0
269

ರಂಗು ರಂಗಿನ ಸೆಟ್, ನೂರಾರು ನೃತ್ಯ ಕಲಾವಿದರು, ಜಗ್ಗೇಶ್, ಅದಿತಿ ಸೇರಿದಂತೆ ಸಾಕಷ್ಟು ಪ್ರಮುಖ ಕಲಾವಿದರು ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಹಾಕಲಾಗಿದ್ದ ಅದ್ದೂರಿ ಸೆಟ್’ನಲ್ಲಿ ‘ತೋತಾಪುರಿ’ ತಂಡ ಬೀಡು ಬಿಟ್ಟಿತ್ತು. ಅದು ಚಿತ್ರದ ಹಾಡೊಂದಕ್ಕೆ ಹಾಕಲಾಗಿದ್ದ ಬೃಹತ್ ಸೆಟ್. ಕಳೆದ ಮೂರು ದಿನಗಳಿಂದ ಸತತವಾಗಿ ಚಿತ್ರೀಕರಣ ನಡೆಸುತ್ತಿರುವ ಈ ಹಾಡಿಗೆ ಖ್ಯಾತ ನೃತ್ಯ ನಿರ್ದೇಶಕ ಮುರಳಿ ಕೊರಿಯೋಗ್ರಫಿಯಲ್ಲಿ ಮೂಡಿಬರುತ್ತಿದೆ. ‘ನೀರ್ ದೋಸೆ’ ಯಶಸ್ಸಿನ ಬಳಿಕ ನಿರ್ದೇಶಕ ವಿಜಯಪ್ರಸಾದ್ ಹಾಗೂ ನಾಯಕ ಜಗ್ಗೇಶ್ ಅವರ ಕಾಂಬಿನೇಷನ್ ‘ತೋತಾಪುರಿ’ ಮೂಲಕ ಮತ್ತೆ ಒಂದಾಗಿದೆ.

ಹಿಂದಿ ಹಾಗೂ ಕನ್ನಡ ಮಿಶ್ರಿತ ಸಾಹಿತ್ಯವಿರುವ ಈ ಹಾಡಿಗೆ ವಿಜಯಪ್ರಸಾದ್ ಪೆನ್ನು ಹಿಡಿದರೆ, ಅನೂಪ್ ಸೀಳಿನ್ ರಾಗ ಸಂಯೋಜಿಸಿದ್ದಾರೆ. ಹಾಡಿನ ಚಿತ್ರೀಕರಣವನ್ನು ಹಿಂದು-ಮುಸ್ಲಿಂ ಗೆಟಪ್’ನಲ್ಲಿಯೇ ಶೂಟಿಂಗ್ ಮಾಡುತ್ತಿರೋದು ವಿಶೇಷ. ಈ ಹಾಡಿನ ಶೂಟಿಂಗ್ ಪೂರ್ಣಗೊಂಡರೆ ಕುಂಬಳಕಾಯಿ ಒಡೆಯಲಿದೆ ಚಿತ್ರತಂಡ. ಗೋವಿಂದಾಯ ನಮಃ, ಶ್ರಾವಣಿ ಸುಬ್ರಮಣ್ಯ, ಶಿವಲಿಂಗ, ರಾಜು ಕನ್ನಡ ಮೀಡಿಯಂ ಸೇರಿದಂತೆ ಮೊದಲಾದ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಕೆ.ಎ.ಸುರೇಶ್ ‘ತೋತಾಪುರಿ’ಗೆ ಬಂಡವಾಳ ಹಾಕಿದ್ದಾರೆ. ಈ ಚಿತ್ರ ಎರಡು ಭಾಗವಾಗಿ ತೆರೆಕಾಣಲಿದ್ದು, ಮೊದಲ ಭಾಗಕ್ಕೆ ‘ತೊಟ್ಟ್ ಕೀಳ್ಬೇಕಷ್ಟೇ…’ ಎಂಬ ಅಡಿಬರಹವಿದ್ದರೆ, ಎರಡನೇ ಭಾಗಕ್ಕೆ ‘ತೊಟ್ಟ್ ಕಿತ್ತಾಯ್ತು…’ ಎಂಬ ಟ್ಯಾಗ್’ಲೈನ್ ಇದೆ.

ತಾರಾಗಣದ ವಿಷಯದಲ್ಲೂ ಈ ಚಿತ್ರ ಸದ್ದು ಮಾಡಿದ್ದು, ಜಗ್ಗೇಶ್, ಅದಿತಿ ಪ್ರಭುದೇವ, ‘ಡಾಲಿ’ ಧನಂಜಯ್, ದತ್ತಣ್ಣ, ಸುಮನ್ ರಂಗನಾಥ್, ವೀಣಾ ಸುಂದರ್, ಹೇಮಾದತ್ ಸೇರಿದಂತೆ ಸುಮಾರು ೮೦ಕ್ಕೂ ಅಧಿಕ ಕಲಾವಿದರು ಪ್ರಮುಖ ತಾರಾಬಳಗದಲ್ಲಿದ್ದಾರೆ. ಬೆಂಗಳೂರು, ಮೈಸೂರು, ಮಡಿಕೇರಿ, ಕೇರಳ ಸೇರಿದಂತೆ ಸಾಕಷ್ಟು ಸ್ಥಳಗಳಲ್ಲಿ ಚಿತ್ರೀಕರಣವಾಗಿರುವ ಈ ಚಿತ್ರ ದಕ್ಷಿಣ ಭಾರತ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎರಡೂ ಭಾಗದ ಸ್ಕ್ರಿಪ್ಟ್ ರೆಡಿ ಮಾಡಿಕೊಂಡು ಒಂದೇ ಬಾರಿ ಎರಡೂ ಭಾಗದ ಶೂಟಿಂಗ್ ನಡೆಸಿದ ಕೀರ್ತಿ ‘ತೋತಾಪುರಿ’ಗೆ ಸಲ್ಲುತ್ತದೆ. ೧೫೦ಕ್ಕೂ ಹೆಚ್ಚಿನ ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಜಗ್ಗೇಶ್ ಅವರ ಸಿನಿ ಕೆರಿಯರ್’ನಲ್ಲೇ ಇದೇ ಮೊದಲ ಬಾರಿಗೆ ಎರಡು ಭಾಗದ ಸಿನಿಮಾಕ್ಕೆ ಬಣ್ಣ ಹಚ್ಚಿದ್ದಾರೆ. ತೆರೆಯ ಮೇಲೆ ಕಮಾಲ್ ಮಾಡಲು ಸದ್ಯದಲ್ಲಿಯೇ ಹಾಜರಾಗಲಿದೆ ‘ತೋತಾಪುರಿ’ ತಂಡ.

Previous articleಪಾಲಿಕೆ ಚುನಾವಣೆ:ಏ.8ರಿಂದ ನಾಮಪತ್ರ ಸಲ್ಲಿಕೆ: ಡಿಸಿ
Next article18 ವರ್ಷದ ನಂತರ ಕನ್ನಡ ಸಿನಿಮಾದಲ್ಲಿ ತೇಜ್

LEAVE A REPLY

Please enter your comment!
Please enter your name here