ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್ ವಿಭಾಗದ ಜಾವೆಲಿನ್ ಥ್ರೋನಲ್ಲಿ ಭಾರತದ ನೀರಜ್ ಚೋಪ್ರಾ ಬಂಗಾರ ಗೆದ್ದಿದ್ದಾರೆ. ಈ ಮೂಲಕ ಚೋಪ್ರಾ ಒಲಿಂಪಿಕ್ಸ್ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ವೈಯಕ್ತಿಕ ವಿಭಾಗದಲ್ಲಿ ಸಿಗುತ್ತಿರುವ ಎರಡನೇ ಬಂಗಾರದ ಪದಕವಿದು. ಹಾಗೇ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಲಭಿಸುತ್ತಿರುವ ಚೊಚ್ಚಲ ಬಂಗಾರವಿದು.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬಂಗಾರದ ಮೆರಗು ತಂದಿರುವ ನೀರಜ್ ಚೋಪ್ರಾಗೆ ಭಾರೀ ನಗದು ಪುರಸ್ಕಾರ ಘೋಷಣೆಯಾಗಿದೆ. ನೀರಜ್ ಅವರ ತವರು ರಾಜ್ಯವಾದ ಹರ್ಯಾಣ ಸರ್ಕಾರ ಅವರಿಗೆ ಬರೋಬ್ಬರಿ 6 ಕೋಟಿ ರೂ. ನಗದು ಪುರಸ್ಕಾರ ಮತ್ತು ‘ಎ’ ಗ್ರೇಡ್ ಸರ್ಕಾರಿ ನೌಕರಿಯನ್ನು ಘೋಷಿಸಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ 2008ರ ಬಳಿಕ ಇದೇ ಚೊಚ್ಚಲ ಬಾರಿಗೆ ರಾಷ್ಟ್ರ ಗೀತೆ ಮೊಳಗಿದೆ. 23ರ ಹರೆಯದ ಜಾವೆಲಿನ್ ಥ್ರೋವರ್ ಈ ಸಾಧನೆ ಮಾಡಿದ್ದಾರೆ. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತದ ಶೂಟರ್ ಬಂಗಾರದ ಪದಕ ಗೆದ್ದಿದ್ದರು. ಅದಾಗಿ ಇದೇ ಮೊದಲ ಬಾರಿಗೆ ಭಾರತಕ್ಕೆ ಬಂಗಾರದ ಪದಕ ಸಿಗುತ್ತಿದೆ.
ದ್ವಿತೀಯ ಎಸೆತದಲ್ಲಿ ನೀರಜ್ ಚಿನ್ನದ ಸಾಧನೆ ಪುರುಷರ ವಿಭಾಗದ ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ (87.58 ಮೀಟರ್) ಪಡೆದುಕೊಂಡರೆ, ಝೆಕ್ ರಿಪಬ್ಲಿಕ್‌ನ ಜಾಕೂಬ್ ವಾಡ್ಲೆಜ್ಚ್ 86.67 ಮೀಟರ್ ಸಾಧನೆಯೊಂದಿಗೆ ಈ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಇನ್ನು ಕಂಚಿನ ಪದಕ ಝೆಕ್ ರಿಪಬ್ಲಿಕ್‌ನವರೇ ವೆಸೆಲಿ ವಿಟೆಜ್ಸ್ಲಾವ್ (85.44 ಮೀಟರ್) ಪಾಲಾಗಿದೆ. ನಾಲ್ಕನೇ ಸ್ಥಾನ ಜರ್ಮನಿಯ ಜೂಲಿಯನ್ ವೆಬ್ಬರ್, ಪಾಕಿಸ್ತಾನದ ಅರ್ಷದ್ ನದೀಮ್ ಐದನೇ ಸ್ಥಾನ ಪಡೆದುಕೊಂಡಿದ್ದಾರೆ. ಗ್ರೂಪ್ ‘ಎ’ಯಲ್ಲಿದ್ದ ನೀರಜ್ ಚೋಪ್ರಾ ಅಲ್ಲೂ ಉತ್ತಮ ಪ್ರದರ್ಶನ ನೀಡಿ ಫೈನಲ್‌ಗೆ ಆಯ್ಕೆಯಾಗಿದ್ದರು.