ಮ್ಯಾಚ್ ರೆಫರೀಗೆ ಹಲ್ಲೆ, ದೀಪಕ್ ಪೂನಿಯಾರ:ವಿದೇಶಿ ಕೋಚ್‍ಗೆ ಗೇಟ್ ಪಾಸ್!

0
180

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಪಾಲ್ಗೊಳ್ಳುತ್ತಿರುವ ಭಾರತೀಯ ಅಧಿಕಾರಿಗಳು, ಕ್ರೀಡಾಪಟುಗಳು ಮುಜುಗರಕ್ಕೀಡಾದ ಘಟನೆ ನಡೆದಿದೆ. ಪುರುಷರ 86 ಕೆಜಿ ರಸ್ಲಿಂಗ್ ಸ್ಪರ್ಧೆಯ ಬಳಿಕ ದೀಪಕ್ ಪೂನಿಯಾರ ವಿದೇಶಿ ಕೋಚ್ ರಷ್ಯಾದ ಮುರಾದ್ ಗೈಡರೋವ್ ಅವರು ಪೂನಿಯಾ ಪಂದ್ಯದ ವೇಳೆ ಮ್ಯಾಚ್ ರೆಫರೀಯಾಗಿದ್ದ ರಷ್ಯಾದ ಸೆರ್ಗಿ ಕೋವಾಲೆಂಕೊ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಕೋಚ್ ವರ್ತನೆಗೆ ಅಸಮಾಧಾನ ಗೊಂಡಿರುವ ಭಾರತೀಯ ರಸ್ಲಿಂಗ್ ಫೆಡರೇಶನ್, ಗೈಡರೋವ್ ಅವರನ್ನು ಕೆಲಸದಿಂದ ಕಿತ್ತು ಹಾಕಿದೆ.

ಗುರುವಾರ (ಆಗಸ್ಟ್ 5) ಕಂಚಿನ ಪದಕಕ್ಕಾಗಿ ನಡೆದ ಪುರುಷರ 86 ಕೆಜಿ ವಿಭಾಗದ ರಸ್ಲಿಂಗ್‍ನಲ್ಲಿ ದೀಪಕ್ ಪೂನಿಯಾ ಸ್ಪರ್ಧಿಸಿದ್ದರು. ಆದರೆ ಪೂನಿಯಾಗೆ ನಿರಾಸೆಯಾಗಿತ್ತು. ಯಾಕೆಂದರೆ ಪಂದ್ಯದಲ್ಲಿ ಪೂನಿಯಾ ಅವರು ಸ್ಯಾನ್ ಮರಿನೋ ದೇಶದ ಮೈಲ್ಸ್ ನಾಜಿಮ್ ಅಮೈನ್ ಎದುರು ದೀಪಕ್ 3-2ರ ಸೋಲನುಭವಿಸಿದ್ದರು. ಹೀಗಾಗಿ ಭಾರತದ ಕೋಚ್ ಮುರಾದ್ ಮತ್ತು ರೆಫರೀ ಕೋವಾಲೆಂಕೊ ಮಧ್ಯೆ ಜಗಳ ನಡೆದಿತ್ತು.

ಗೈಡರೋವ್ ಅಸಭ್ಯವಾಗಿ ವರ್ತನೆ, ಹಲ್ಲೆ, ಕೂಗಾಟ
ಪಂದ್ಯದಲ್ಲಿ ತೀರ್ಪು ದೀಪಕ್ ಪೂನಿಯಾ ಪರವಾಗಿ ಬಾರದಿದ್ದರಿಂದ ಕೋಪಗೊಂಡ ಮುರಾದ್ ಗೈಡರೋವ್, ಮ್ಯಾಚ್ ರೆಫರೀ ಸೆರ್ಗಿ ಕೋವಾಲೆಂಕೊ ಅವರ ಮೇಲೆ ಅಸಭ್ಯವಾಗಿ ವರ್ತಿಸಿದ್ದಾರೆ, ಹಲ್ಲೆ ಮಾಡಿದ್ದಾರೆ ಮತ್ತು ಕೂಗಾಡಿದ್ದಾರೆ ಎಂದು ತಿಳಿದು ಬಂದಿದೆ. ಮಕುಹರಿ ಮೆಸ್ಸೆ ಅರೆನಾದ ಹಾಲ್‍ನಲ್ಲಿ ನಡೆದಿದ್ದ ದೀಪಕ್ ಮತ್ತು ಮೈಲ್ಸ್ ನಾಜಿಮ್ ಪಂದ್ಯದ ವೇಳೆ ಗೈಡರೋವ್ ಅವರು ಕೋಪಗೊಂಡು ನಿಯಂತ್ರಣಕ್ಕೆ ಮೀರಿ ವರ್ತಿಸಿ ದ್ದರು. ಕೋವಾಲೆಂಕೊ ಅವರು ನಿರ್ಣಾಯಕ ಎರಡು ಅಂಕಗಳನ್ನು ದೀಪಕ್ ಎದುರಾಳಿ ನಾಜಿಮ್ ಅಮೈನ್‍ಗೆ ನೀಡಿದರು. ದೀಪಕ್ ಅವರನ್ನು ಕೆಳ ಬೀಳಿಸಿದ್ದಕ್ಕಾಗಿ ಅಮೈನ್‍ಗೆ ಅಂಕ ನೀಡಲಾಗಿತ್ತು. ಪಂದ್ಯ ಮುಗಿಯಲು ಇನ್ನೇನು 6 ಸೆಕೆಂಡ್‍ಗಳು ಬಾಕಿಯಿರುವಾಗ ಈ ಬೆಳವಣಿಗೆ ನಡೆದಿತ್ತು. ಹೀಗಾಗಿ ಗೈಡರೋವ್ ಕುಪಿತಗೊಂಡಿದ್ದರು.

ಗೆಲ್ಲಬೇಕಿದ್ದ ದೀಪಕ್‍ಗೆ ಕೊನೇ ಕ್ಷಣದಲ್ಲಿ ಸೋಲು
ಅಸಲಿಗೆ ಪಂದ್ಯದ ಆರಂಭದಲ್ಲಿ ದೀಪಕ್ ಪೂನಿಯಾ 2-1ರ ಮುನ್ನಡೆಯಲ್ಲಿದ್ದರು. ಕೊನೇ ಕ್ಷಣದಲ್ಲಿ ಎದುರಾಳಿ ಅಮೈನ್ ಅವರು ದೀಪಕ್ ಅವರನ್ನು ಕೆಳ ಬೀಳಿಸಿದ್ದಕ್ಕಾಗಿ ಅವರಿಗೆ 2 ಅಂಕ ನೀಡಿದ್ದರಿಂದ ಅಂತಿಮ ಕ್ಷಣದಲ್ಲಿ ಅಮೈನ್ 3-2ರ ಗೆಲುವನ್ನಾಚರಿಸಿ ಕಂಚು ಗೆದ್ದಿದ್ದರು.
ಕೊನೇ ಕ್ಷಣದಲ್ಲಿ ಭಾರತೀಯ ಸ್ಪರ್ಧಿಗೆ ವಿರುದ್ಧವಾಗಿ ಎದುರಾಳಿಗೆ ಎರಡು ಅಂಕ ನೀಡಿದ್ದು ಮುರಾದ್ ಗೈಡರೋವ್ ಅವರಿಗೆ ಕೋಪ ತರಿಸಿತ್ತು. ಕೋಪ ನಿಯಂತ್ರಿಸಿಕೊಳ್ಳಲಾಗದ ಗೈಡರೋವ್, ಎದುರಾಳಿಗೆ ಅಂಕ ನೀಡಿದ ರೆಫರೀ ಕೋವಾಲೆಂಕೊ ಮೇಲೆ ರೇಗಾಡಿ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಯುನೈಟೆಡ್ ವಲ್ರ್ಡ್ ರಸ್ಲಿಂಗ್ (ಯುಡಬ್ಲ್ಯೂಡಬ್ಲ್ಯೂ) ಕಾರ್ಯದರ್ಶಿ ಮೈಕೆಲ್ ಡಸನ್ ಅವರ ಕುರ್ಚಿಗೂ ಒದ್ದು ಅಸಮಾಧಾನ ತೋರಿಕೊಂಡಿದ್ದರು.

ಮುರಾದ್ ಗೈಡರೋವ್ ಜೊತೆಗಿನ ಒಪ್ಪಂದ ಅಂತ್ಯ
ಒಲಿಂಪಿಕ್ಸ್‍ನಂತ ಜಾಗತಿಕ ಕ್ರೀಡಾಕೂಟದ ವೇಳೆ ಎಲ್ಲೆ ಮೀರಿದ ವರ್ತನೆ ತೋರಿದ ಕೋಚ್ ಮುರಾದ್ ಗೈಡರೋವ್ ಅವರನ್ನು ರಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯೂಎಫ್‍ಐ) ಕೆಲಸದಿಂದ ಈ ಕೂಡಲೇ ಕಿತ್ತುಹಾಕಿದೆ. ಅವರ ಜೊತೆಗಿನ ಒಪ್ಪಂದವನ್ನೂ ರದ್ದುಗೊಳಿಸಲಾಗಿದೆ. ಆಗಸ್ಟ್ 7ರ ಶನಿವಾರ ಗೈಡರೋವ್ ಭಾರತಕ್ಕೆ ವಾಪಸ್ಸಾಗಿ ಅಲ್ಲಿಂದ ತನ್ನ ವಸ್ತುಗಳನ್ನು ತೆಗೆದುಕೊಂಡು ಭಾನುವಾರ (ಆಗಸ್ಟ್ 8) ರಷ್ಯಾಕ್ಕೆ ತೆರಳಲಿದ್ದಾರೆ. ಭಜರಂಗ್ ಪೂನಿಯಾ ಅವರ ವಿದೇಶಿ ಕೋಚ್ ಬೆಂಟಿನಿಡಿಸ್ ಶಾಕೊ ಮತ್ತು ರವಿಕುಮಾರ್ ದಾಹಿಯ ಕೋಚ್ ಕಮಲ್ ಮಲಿಕೋವ್ ಜೊತೆ ಜೊತೆಗೆ ಗೈಡರೋವ್ ಅವರು ಡಬ್ಲ್ಯೂಎಫ್‍ಐ ಜೊತೆಗೆ ಒಪ್ಪಂದ ಹೊಂದಿದ್ದರು.

Previous articleಟೋಕಿಯೋ ಒಲಿಂಪಿಕ್ಸ್: ಐತಿಹಾಸಿಕ ಪದಕ ಕೈಚೆಲ್ಲಿದ ಕನ್ನಡತಿ ಅದಿತಿ ಅಶೋಕ್
Next articleಟೋಕಿಯೋ 2021: ಏಷ್ಯನ್ ದಾಖಲೆ ಮುರಿದರೂ ಫೈನಲ್‍ಗೆ ವಿಫಲವಾದ ಭಾರತೀಯ ರಿಲೇ ತಂಡ

LEAVE A REPLY

Please enter your comment!
Please enter your name here