ಟೀಮ್ ಇಂಡಿಯಾ ಆಟಗಾರರ ಧೈರ್ಯ ಸಾಕಾಗಲಿಲ್ಲ: ಸೋತ ಬಳಿಕ ನಾಯಕ ಕೊಹ್ಲಿ ಮಾತು

0
273

ನ್ಯೂಜಿಲೆಂಡ್ ತಂಡದ ವಿರುದ್ಧ 8 ವಿಕೆಟ್‌ಗಳ ಅಂತರದಿಂದ ಸೋಲು ಕಂಡ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಆಟಗಾರರ ಪ್ರದರ್ಶನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಾಯಕ ಕೊಹ್ಲಿ ಆಟಗಾರರ ಒಟ್ಟಾರೆ ಧೈರ್ಯ ತಂಡದ ಗೆಲುವಿಗೆ ಸಾಕಾಗಲಿಲ್ಲ ಎಂದಿದ್ದಾರೆ. “ಈ ಸೋಲು ತುಂಬಾ ವಿಲಕ್ಷಣವಾಗಿದೆ. ನನ್ನ ಪ್ರಕಾರ ಬ್ಯಾಟ್ ಹಾಗೂ ಬೌಲಿಂಗ್‌ನಲ್ಲಿ ನಮ್ಮ ತಂಡ ವ್ಯಕ್ತಪಡಿಸಿದ ಧೈರ್ಯ ಸಾಕಾಗಲಿಲ್ಲ ಎನಿಸುತ್ತದೆ. ನಾವು ರನ್‌ ಉಳಿಸಿಕೊಳ್ಳಲು ಹೆಚ್ಚಿನ ಗುರಿ ನೀಡಿರಲಿಲ್ಲ. ಅಲ್ಲದೆ ನಾವು ಅಂಗಳಕ್ಕಿಳಿಯುವಾಗ ಹೆಚ್ಚಿನ ಆತ್ಮ ಸ್ಥೈರ್ಯದೊಂದಿಗೆ ಕಣಕ್ಕಿಳಿದಿರಲಿಲ್ಲ ಎಂದಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಆಟಗಾರನಾಗಿ ನೀವು ಕಣಕ್ಕಿಳಿಯುತ್ತಿದ್ದೀರಿ ಎಂದರೆ ನಿಮ್ಮ ಮೇಲೆ ಸಾಕಷ್ಟು ನಿರೀಕ್ಷೆಗಳು ಇರುತ್ತದೆ. ಅದು ಕೇವಲ ಅಭಿಮಾನಿಗಳಿಂದ ಮಾತ್ರವೇ ಇರುವುದಿಲ್ಲ. ಆಟಗಾರರಿಂದಲೂ ಇರುತ್ತದೆ. ಹಾಗಾಗಿ ನಮ್ಮ ಆಟದಲ್ಲಿ ಯಾವಾಗಲೂ ಗೆಚ್ಚಿನ ಒತ್ತಡ ಇರುತ್ತದೆ. ನಾವು ಈ ಒತ್ತಡವನ್ನು ಸುದೀರ್ಘ ಕಾಲದಿಂದ ಸ್ವೀಕರಿಸಿದ್ದೇವೆ” ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಎರಡು ಭಾರೀ ಅಂತರದ ಸೋಲು ಅನುಭವಿಸಿದ ನಂತರ ಭಾರತ ಸೆಮಿ ಫೈನಲ್‌ಗೆ ಏರುವ ಅವಕಾಶವನ್ನು ಕಠಿಣಗೊಳಿಸಿದೆ. ಭಾರತ ಇರುತ ಗ್ರೂಪ್ 2ರಲ್ಲಿ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಂಡಗಳು ಮೊದಲ ಎರಡು ಸ್ಥಾನಗಳಲ್ಲಿ ಇದೆ. ಭಾರತ ಎರಡು ಪಂದ್ಯಗಳನ್ನಾಡಿದ ನಂತರವೂ ಅಂಕದ ಖಾತೆ ತೆರೆದಿಲ್ಲ. ಅಲ್ಲದೆ ತಂಡ ರನ್‌ರೇಟ್ ವಿಚಾರದಲ್ಲಿ ಕೂಡ ಸಾಕಷ್ಟು ಹಿನ್ನಡೆ ಅನುಭವಿಸಿದೆ. ಇನ್ನು ಈ ವಿಚಾರವಾಗಿ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ ಟೂರ್ನಿಯ ಅಂತ್ಯಕ್ಕೆ ಇನ್ನೂ ಕಾಲವಿದೆ. ಭಾರತ ತಂಡಕ್ಕೆ ಇನ್ನು ಕೂಡ ಮೂರು ಪಂದ್ಯಗಳು ಇವೆ ಎಂದಿದ್ದಾರೆ. “ಭಾರತ ತಂಡದ ಮೇಲಿರುವ ಒತ್ತಡವನ್ನು ತಂಡದ ಎಲ್ಲಾ ಆಟಗಾರರು ಕೂಡ ನಿಭಾಯಿಸಲು ಸಮರ್ಥರಾಗಿದ್ದಾರೆ. ಅಲ್ಲದೆ ಎಲ್ಲರೂ ಒಗ್ಗಟ್ಟಾದಾಗ ಈ ಸ್ಥಿತೊಯಿಂದ ಹೊರಬರಲು ಸಾಧ್ಯವಿದೆ. ಎರಡು ಪಂದ್ಯಗಳು ಮುಗಿದ ಕೂಡಲೇ ಎಲ್ಲವೂ ಮುಗಿದುಹೋಗಿಲ್ಲ. ಭಾರತೀಯ ತಂಡವಾಗಿರುವ ಕಾರಣಕ್ಕಾಗಿ ನಿರೀಕ್ಷೆಗಳು ಹೆಚ್ಚಿರುತ್ತದೆ ಎಂದ ಮಾತ್ರಕ್ಕೆ ನಾವು ನೇರವಾಗಿ ಪ್ಲೇಆಫ್‌ನಲ್ಲಿ ಆಡಲು ಸಾಧ್ಯವಿಲ್ಲ. ನನ್ನ ಪ್ರಕಾರ ನಾವಿನ್ನೂ ಸಮರ್ಥರೂ ಇನ್ನು ಉತ್ತಮ ಕ್ರಿಕೆಟ್ ಆಡುವುದು ಬಾಕಿಯಿದೆ” ಎಂದು ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಮೊದಲಿಗೆ ಬ್ಯಾಟಿಂಗ್ ನಡೆಸಿ ಕೇವಲ 110 ರನ್‌ಗಳಿಸಲಷ್ಟೇ ಶಕ್ತವಾಯಿತು. ಟೀಮ್ ಇಂಡಿಯಾ ಪರವಾಗಿ ಯಾರಿಂದಲೂ ಕೂಡ ಉತ್ತಮ ಜೊತೆಯಾಟ ಬಂದಿರಲಿಲ್ಲ. ಹೀಗಾಗಿ ಟೀಮ್ ಇಂಡಿಯಾ ಉತ್ತಮ ಮೊತ್ತದ ಗುರಿ ನೀಡಲು ಸಾಧ್ಯವಾಗಲೇ ಇಲ್ಲ. ಭಾರತ ನೀಡಿದ 111 ರನ್‌ಗಳ ಗುರಿಯನ್ನು ನ್ಯೂಜಿಲೆಂಡ್ ಪಡೆ ಕೇವಲ 2 ವಿಕೆಟ್ ಕಳೆದುಕೊಂಡು 14ನೇ ಓವರ್‌ನ್ಲಲಿಯೇ ಗೆದ್ದು ಬೀಗಿತು. ಈ ಮೂಲಕ ನಿರ್ಣಾಯಕ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಪಡೆ ಗೆಲುವು ಸಾಧಿಸಲು ಯಶಸ್ವಿಯಾಗಿದೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಂತಕ್ಕೇರಲು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಈ ಮೂಲಕ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೇರುವ ಅವಕಾಶ ಬಹುತೇಕ ಕಮರಿದಂತಾಗಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯವನ್ನು ಭಾರತ 8 ವಿಕೆಟ್‌ಗಳ ಅಂತರದಿಂದ ಕಳೆದುಕೊಂಡ ಕಾರಣ ಸತತ ಎರಡನೇ ಸೋಲು ಅನುಭವಿಸಿದೆ. ಈ ಸೋಲಿನ ಬಗ್ಗೆ ಈಗ ಸಾಕಷ್ಟು ಚರ್ಚೆ ನಡೆಯುತ್ತಿದ್ದು ತಮ್ಮದೇ ಆದ ವಿಶ್ಲೇಷಣೆಗಳನ್ನು ಮಾಡಿತ್ತಿದ್ದಾರೆ. ಟೀಮ್ ಇಂಡಿಯಾ ತನ್ನ ಮುಂದಿನ ಪಂದದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಈ ಪಂದ್ಯ ನವೆಂಬರ್ 3 ರಂದು ನಡೆಯಲಿದ್ದು ಅಬುಧಾಬಿಯಲ್ಲಿ ಆಯೋಜನೆಯಾಗಲಿದೆ.

Previous articleಕನ್ನಡ ನಾಡಿನಲ್ಲಿ ಸುಖ-ಶಾಂತಿ ನೆಲೆಸಲಿ : ಸಚಿವ ಹಾಲಪ್ಪ ಆಚಾರ್
Next articleಟಿ20 ವಿಶ್ವಕಪ್‌ನಲ್ಲಿ ಭಾರತದ ಹೀನಾಯ ಸ್ಥಿತಿಗೆ ಕಾರಣ ಈ ಮೂರು ಅಂಶಗಳು!

LEAVE A REPLY

Please enter your comment!
Please enter your name here