ದಕ್ಷಿಣ ಭಾರತದ ಖ್ಯಾತ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನರಾಗಿದ್ದಾರೆ. ಅನಾರೋಗ್ಯದಿಂದ ವಿದ್ಯಾಸಾಗರ್ ಬಳಲುತ್ತಿದ್ದರು. ಚೆನ್ನೈನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವಿದ್ಯಾಸಾಗರ್ ಕೆಲವು ವರ್ಷಗಳಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಜನವರಿಯಲ್ಲಿ ಇಡೀ ಕುಟುಂಬ ಕೋವಿಡ್ 19 ಸೋಂಕಿಗೆ ಒಳಗಾಗಿತ್ತು. ಈ ವೇಳೆ ಶ್ವಾಸಕೋಶದ ಸಮಸ್ಯೆ ಉಲ್ಬಣಗೊಂಡಿದ್ದರೂ ವಿದ್ಯಾಸಾಗರ್ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದರು. ಆದರೆ ಮತ್ತೆ ಕೆಲವು ದಿನಗಳ ಹಿಂದೆ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಂಡಿದ್ದು, ಹೀಗಾಗಿ ಕೆಲವು ವಾರಗಳ ಹಿಂದೆ ವಿದ್ಯಾಸಾಗರ್ ಅವರಿಗೆ ಶ್ವಾಸಕೋಶದ ಸೋಂಕಿನ ಕಸಿ ಮಾಡಿಸಿಕೊಳ್ಳುವಂತೆ ವೈದ್ಯರು ಸೂಚಿಸಿದ್ದರು. ಆದರೆ ಕಸಿ ಮಾಡಿಸಿಕೊಳ್ಳಲು ದಾನಿಗಳು ಸರಿಯಾಗಿ ಸಿಗಲಿಲ್ಲ ಎಂದು ತಿಳಿದುಬಂದಿದೆ.