ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನದ ವಿರುದ್ಧ ಅಮೋಘ ಪ್ರದರ್ಶನ ನೀಡಿ ಗೆಲುವು ಸಾಧಿಸಿದ್ದು 6ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಫೈನಲ್ ಪಂದ್ಯದ ಆರಂಭದಲ್ಲಿ ಭಾರೀ ಹಿನ್ನಡೆ ಅನುಭವಿಸಿದತಾದರೂ ಬಳಿಕ ಪಂದ್ಯವನ್ನು ಹತೋಟಿಗೆ ಪಡೆದುಕೊಂಡ ಶ್ರೀಲಂಕಾ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂರು ವಿಭಾಗದಲ್ಲಿಯೂ ಅಮೋಘ ಪ್ರದರ್ಶನ ನೀಡಿದ ಶ್ರೀಲಂಕಾ ಗೆದ್ದು ಟ್ರೋಫಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದೆ.
ಈ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡದ ಪರವಾಗಿ ಅದ್ಭುತ ಪ್ರದರ್ಶನ ನೀಡಿದ್ದು ಸ್ಪಿನ್ ಮಾಂತ್ರಿಕ ವನಿಂದು ಹಸರಂಗಾ. ಮೊದಲಿಗೆ ಬ್ಯಾಟಿಂಗ್ನಲ್ಲಿ ಪರಿಣಾಮಕಾರಿ ಇನ್ನಿಂಗ್ಸ್ ನೀಡಿದ ವನಿಂದು ಹಸರಂಗಾ ನಂತರ ಬೌಲಿಂಗ್ನಲ್ಲಿಯೂ ಮ್ಯಾಜಿಕ್ ಮಾಡಿದರು. ಈ ಮೂಲಕ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಪರವಾಗಿ ಹೀರೋ ಆಗಿ ಮಿಂಚಿದ್ದಾರೆ.
ಬ್ಯಾಟಿಂಗ್ನಲ್ಲಿ ಭರ್ಜರಿ ಪ್ರದರ್ಶನ
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಪಡೆದ ಶ್ರೀಲಂಕಾ ತಂಡ ಅಗ್ರ ಕ್ರಮಾಂಕದ ವಿಕೆಟ್ಗಳನ್ನು ಶೀಘ್ರವಾಗಿ ಕಳೆದುಕೊಳ್ಳುತ್ತಾ ಸಾಗುವ ಮೂಲಕ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಭಾನುಕಾ ರಾಜಪಕ್ಷ ಅವರೊಂದಿಗೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಹಸರಂಗ ತಂಡಕ್ಕೆ ಮೊದಲ ಚೈತನ್ಯ ನೀಡಿದರು. 21 ಎಸೆತಗಳನ್ನು ಎದುರಿಸಿದ ಹಸರಂಗಾ 36 ರನ್ಗಳ ಕೊಡುಗೆ ನೀಡುವ ಮೂಲಕ ತಂಡಕ್ಕೆ ನೆರವಾದರು. ಇದರ ಜೊತೆಗೆ ರಾಜಪಕ್ಷ ಜೊತೆ ಸೇರಿ ಶ್ರೀಲಂಕಾಗೆ ನಿರ್ಣಾಯಕವ ಜೊತೆಯಾಟದಲ್ಲಿ ಭಾಗಿಯಾದರು. ಈ ಪ್ರದರ್ಶನದ ಕಾರಣದಿಂದಾಗಿ ಶ್ರೀಲಂಕಾ ತಂಡ ಭರ್ಜರಿ 170 ರನ್ಗಳನ್ನು ಗಳಿಸಲು ಶಕ್ತವಾಗಿತ್ತು.
ಲಂಕಾ ಗೆಲುವಿನ ಮತ್ತಿಬ್ಬರು ಹೀರೋಗಳು
ಶ್ರೀಲಂಕಾ ಪಾಕಿಸ್ತಾನದ ವಿರುದ್ಧ ನಡೆದ ಈ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಲು ಕಾರಣವಾದ ಮತ್ತಿಬ್ಬರು ಆಟಗಾರರೆಂದರೆ ಅದು ಭಾನುಕಾ ರಾಜಪಕ್ಷ ಹಾಗೂ ಪ್ರಮೋದ್ ಮದುಶನ್. ಬ್ಯಾಟಿಂಗ್ನಲ್ಲಿ ಭಾನುಕಾ ರಾಜಪಕ್ಷ ಶ್ರೀಲಂಕಾ ಪಾಲಿಗೆ ಅಕ್ಷರಶಃ ಹೀರೋ ಆಗಿ ಮೆರೆದಿದ್ದಾರೆ. ಕೇವಲ 45 ಎಸೆತಗಳಲ್ಲಿ 71 ರನ್ ಸಿಡಿಸಿದ ರಾಜಪಕ್ಷ ತಂಡ ಸವಾಲಿನ ಗುರಿ ನೀಡಲು ಕಾರಣವಾದರು. ಇನ್ನು ಈ ಪಂದ್ಯದ ಮೂಲಕ ಕೇವಲ ಎರಡನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡುತ್ತಿರುವ ಪ್ರಮೋದ್ ಮದಿಶನ್ ಈ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದು ಮಿಂಚಿದ್ದಾರೆ. ಈ ಮೂಲಕ ಶ್ರೀಲಂಕಾ ತಂಡಕ್ಕೆ ಬಹಳ ಅನಿವಾರ್ಯವಾಗಿದ್ದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದ್ದಾರೆ.